ರಾಜಕೀಯ ಕಸರತ್ತಿನಿಂದ ಯೋಜನೆ ಅನುಷ್ಠಾನ ವಿಳಂಬ
- ಮೌನೇಶ್ ವಿಶ್ವಕರ್ಮ
ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳು ನೂರಾರು. ರಾಜಕೀಯ ಕಸರತ್ತುಗಳಿಂದಾಗಿ ಕೆಲ ಯೋಜನೆಗಳ ಅನುಷ್ಠಾನ ವಿಳಂಬವಾಗಿದ್ದರೆ, ಈ ಹಿಂದಿನ ಶಾಸಕತ್ವದ ಅವಧಿಯ ಕೆಲ ಯೋಜನೆಗಳಿಗೆ ಈ ಅವಧಿಯಲ್ಲಿ ತ್ವರಿತ ಚಾಲನೆ ಸಿಗದ ಆರೋಪವೂ ಇವೆ.
ಅನುಭವಿ ಶಾಸಕ ಬಿ. ರಮಾನಾಥ ರೈ ಶಾಸಕತ್ವದಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಕಳೆದ 2008 ರಿಂದ ಈವರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ, ಲೋಕೋಪಯೋಗಿ ಇಲಾಖೆ, ನಮ್ಮಗ್ರಾಮ ನಮ್ಮ ರಸ್ತೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಸಣ್ಣ ನೀರಾವರಿ ಇಲಾಖೆಯ ಅನುದಾನ ಸೇರಿದಂತೆ ಸುಮಾರು ರು. 223.62 ಕೋಟಿ ವೆಚ್ಚದ 393 ಕಾಮಗಾರಿಗಳಾಗಿದ್ದು, ಹಲವು ಕಾಮಗಾರಿಗಳು ಪೂರ್ಣಗೊಂಡಿದೆ. ಕೆಲವು ಕಾಮಗಾರಿಗಳು ಇನ್ನೂ ಅನುಮೋದನೆ, ಟೆಂಡರ್, ಕಾಮಗಾರಿ ಪ್ರಗತಿಯ ಹಂತದಲ್ಲಿಯೇ ಇದೆ.
ಯೋಜನೆ ಅನುಷ್ಠಾನದಲ್ಲಿ ಜಾಗ್ರತೆ: ಮಂಜೂರಾದ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಾಗ್ರತೆ ವಹಿಸಿದ್ದ ಹಿನ್ನೆಲೆಯಲ್ಲಿ, ಕಳೆದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಯಾವುದೇ ಯೋಜನೆಗಳ ಅನುದಾನಗಳು ಲ್ಯಾಪ್ಸ್ ಆದ ಉದಾಹರಣೆಗಳಿಲ್ಲ.
ಸರ್ಕಾರದ ಬೃಹತ್ ಮೇಲ್ಮೈ ನೀರು ಸರಬರಾಜು ಯೋಜನೆಯಂತೆ ನದಿಯ ನೀರನ್ನು ಬಳಸಿ ತಾಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸರ್ಕಾರದ ಅನುಮೋದನೆ ದೊರೆತಿರುವುದು ರೈಯವರ ಒಂದು ಸಾಧನೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕಾರ್ಯಗತಗೊಳ್ಳುವ ಈ ಯೋಜನೆಗಾಗಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಒಟ್ಟು 26 ಗ್ರಾಮ ಪಂಚಾಯಿತಿ ವ್ಯಾಪ್ತಿಯ 42 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದ್ದು, ಒಟ್ಟು ರು. 124ಕೋಟಿ 35 ಲಕ್ಷ ಅಂದಾಜು ವೆಚ್ಚವನ್ನು ನಿರೀಕ್ಷಿಸಲಾಗಿರುವ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ನಿರೀಕ್ಷೆ ಇರಿಸಿಕೂಳ್ಳಲಾಗಿದೆ.
ಟೆಂಡರ್ ಪ್ರಕ್ರಿಯೆ ಪೂರ್ಣ: ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2011- 12ನೇ ಸಾಲಿನಲ್ಲಿ ಕ್ಷೇತ್ರ ವ್ಯಾಪ್ತಿಯ 18.04 ಕಿ.ಮೀ. ರಸ್ತೆಗಳನ್ನು ರು. 5,60,28,000 ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, 2012- 13ನೇ ಸಾಲಿಗೆ 30 ಕಿ.ಮೀ. ವಿಸ್ತೀರ್ಣದ ರಸ್ತೆಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.
ಕಾಮಗಾರಿ ಪ್ರಗತಿಯಲ್ಲಿ: 2011- 12 ನೇ ಸಾಲಿನಲ್ಲಿ ರು. 5 ಕೋಟಿ ವೆಚ್ಚದಲ್ಲಿ ಬಂಟ್ವಾಳ ಕ್ಷೇತ್ರ ವ್ಯಾಪ್ತಿಯ 22 ಸರ್ಕಾರಿ ಕೆರೆಗಳ ಹೂಳೆತ್ತುವ ಹಾಗೂ ಸಂರಕ್ಷಣಾ ಕಾರ್ಯ ನಡೆಸಲಾಗಿದ್ದು, ಕೆಲ ಕಾಮಗಾರಿಗಳು ಪ್ರಗತಿಯಲ್ಲಿದೆ.
ರು. 2.50 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲನಿಗಳಿಗೆ ಮೂಲ ಸೌಕರ್ಯ ಒದಗಿಸುವ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, 15ಕ್ಕೂ ಅಧಿಕ ರಸ್ತೆಗಳ ಕಾಂಕ್ರೀಟಿಕರಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ರು. 6 ಕೋಟಿ ವೆಚ್ಚದಲ್ಲಿ 50 ಹಾಸಿಗೆಯಿಂದ 100 ಹಾಸಿಗೆಯಾಗಿ ಮೇಲ್ದರ್ಜಗೇರಿಸುವ ಕಾಮಗಾರಿ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.
ಕ್ಷೇತ್ರ ಶಾಸಕರೆನ್ನುವುದನ್ನು ಮರೆತಿದ್ದಾರೆ: ಶೆಟ್ಟಿ ಲೇವಡಿ
ಶಾಸಕರಾದವರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು ಗಮನದಲ್ಲಿರಿಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಬೇಕು ವಿನಃ ಜಾತಿ, ಮತ, ಪಕ್ಷವನ್ನು ಗಮನದಲ್ಲಿರಿಸಿಕೊಂಡಲ್ಲ. ರಮಾನಾಥ ರೈ ಯವರು ಕ್ಷೇತ್ರದ ಶಾಸಕರೆನ್ನುವುದನ್ನು ಮರೆತು ಏಕಪಕ್ಷೀಯವಾದ ಅಭಿವೃದ್ಧಿ ಕೆಲಸಗಳನ್ನು ನಡೆಸಿದ್ದಾರೆ ಎನ್ನುವುದು ಬಂಟ್ವಾಳ ಕ್ಷೇತ್ರದ ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಬಿ. ನಾಗರಾಜ ಶೆಟ್ಟಿ ಆರೋಪ. ತಾನು ಬಂಟ್ವಾಳದ ಶಾಸಕನಾಗಿದ್ದ ಅವಧಿಯಲ್ಲಿ ಬಂಟ್ವಾಳಕ್ಕೆ ಮಂಜೂರಾಗಿದ್ದ ಒಳಚರಂಡಿ ಯೋಜನೆ, ಅಗ್ನಿಶಾಮಕ ಠಾಣೆ, 100 ಬೆಡ್ನ ಆಸ್ಪತ್ರೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುನ್ನಡೆಸುವುದರಲ್ಲಿ ರೈ ವಿಫಲರಾಗಿದ್ದಾರೆ. ಬಂಟ್ವಾಳದ ಕನಸಾದ ಸರ್ಕಾರಿ ಬಸ್ ನಿಲ್ದಾಣ, ಮಿನಿ ವಿಧಾನ ಸೌಧವನ್ನು ಬಂಟ್ವಾಳಕ್ಕೆ ದೊರಕಿಸಿಕೊಡುವಲ್ಲಿ ಸೋತಿದ್ದಾರೆ ಎಂದು ನಾಗರಾಜ ಶೆಟ್ಟಿ 'ಕನ್ನಡ ಪ್ರಭ'ಕ್ಕೆ ಪ್ರತಿಕ್ರಿಯಿಸಿದ್ದಾರೆ.