ಅನುದಾನ ಬಂದರೂ ನಿರೀಕ್ಷಿಸಿದಷ್ಟು ಕೆಲಸವಾಗಿಲ್ಲ
- ಸಂಶುದ್ದೀನ್ ಸಂಪ್ಯ
ಪುತ್ತೂರು: ತಮ್ಮ ಚೊಚ್ಚಲ ಶಾಸಕತ್ವದ ಅವಧಿಯಲ್ಲಿ ಮಲ್ಲಿಕಾ ಪ್ರಸಾದ್ ಅವರು ಜನರ ನಿರೀಕ್ಷೆಯ ಮಟ್ಟಕ್ಕೆ ಕೆಲಸ ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿದ್ದರೂ ಬಹುತೇಕ ಜನರ ಮೂಲ ಬೇಡಿಕೆಗಳನ್ನು ಅಲ್ಪಮಟ್ಟಿಗೆ ಈಡೇರಿಸುವಲ್ಲಿ ಸಫಲರಾಗಿದ್ದಾರೆ.
ಪುತ್ತೂರು ಬಸ್ಸು ನಿಲ್ದಾಣದ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ. ವಿಟ್ಲ ಬಸ್ಸು ನಿಲ್ದಾಣದ ಕಾಂಕ್ರಿಟೀಕರಣ ಕಾಮಗಾರಿ ಅರ್ಧದಲ್ಲಿದ್ದು ನಿರೀಕ್ಷಿತ ಫಲಿತಾಂಶ ಕಂಡು ಬಂದಿಲ್ಲ. ಮಲ್ಲಿಕಾ ಪ್ರಸಾದ್ ಅವರು ತಮ್ಮ ಅನುದಾನದಡಿ ಕೈಗೊಂಡಿರುವ ಒಟ್ಟು ಕಾಮಗಾರಿಗಳಲ್ಲಿ ಸುಮಾರು ಶೇ.80ರಷ್ಟು ಪೂರ್ಣಗೊಂಡಿವೆ. ಬಿಡುಗಡೆಯಾದ ಅನುದಾನ ಹಾಗೂ ಕೈಗೊಂಡ ಕಾಮಗಾರಿಗಳ ಸ್ಥಿತಿಗತಿಯ ಸ್ಥೂಲ ನೋಟ ಇಲ್ಲಿದೆ.
ಸರ್ಕಾರಿ ಕಟ್ಟಡಗಳು: ಪುತ್ತೂರಿನ ಮಿನಿ ವಿಧಾನಸೌಧ ಕಟ್ಟಡಕ್ಕೆ 8 ಕೋಟಿ, ನ್ಯಾಯಾಲಯದ ಮೇಲಂತಸ್ತು ಕಟ್ಟಡಕ್ಕೆ 1.80 ಕೋಟಿ, ನಗರ ಪೊಲೀಸ್ ಠಾಣೆಯ ಕಟ್ಟಡಕ್ಕೆ ರು. 39 ಲಕ್ಷ, ವಿಟ್ಲ ಪೊಲೀಸ್ ಠಾಣೆಯ ಕಟ್ಟಡಕ್ಕೆ ರು. 32 ಲಕ್ಷ ಬಿಡುಗಡೆಯಾಗಿದೆ. ಮಿನಿ ವಿಧಾನಸೌಧ ಕಟ್ಟಡ ಹೊರತು ಪಡಿಸಿ ಉಳಿದ ಎಲ್ಲ ಕಟ್ಟಡಗಳ ಕಾಮಗಾರಿಗಳು ಪೂರ್ಣಗೊಂಡಿದೆ.
ಸೇತುವೆಗಳು: ಬಲ್ನಾಡು ಗ್ರಾಮದ ಬಬ್ಬಿಲಿ ಬಾಯಾರು ಚನಿಲ ರಸ್ತೆ ಮತ್ತು ಸೇತುವೆಗೆ 1.09 ಕೋಟಿ, ಮಾಡಾವು ಸೇತುವೆಗೆ ರು. 1 ಕೋಟಿ, ಬೈಲಾಡಿ ಸೇತುವೆ ಕೂಡು ರಸ್ತೆಗೆ ರು. 75 ಲಕ್ಷ, ಮಾಣಿಲ ಕೊಮ್ಮುಂಜೆ ಸೇತುವೆಗೆ ರು. 70 ಲಕ್ಷ, ಪೈಂತಿಮುಗೇರು ಸೇತುವೆಗೆ ರು. 50 ಲಕ್ಷ, ಬಿಳಿಯೂರು ಓಟೆಚಾರು ಸೇತುವೆಗೆ ರು. 25 ಲಕ್ಷ ವಿನಿಯೋಗಿಸಲಾಗಿದೆ. ಈ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ.
ಸಾರಿಗೆ: ಪುತ್ತೂರು ಕೆಎಸ್ಆರ್ಟಿಸಿ ನಿಲ್ದಾಣಕ್ಕೆ ರು. 8 ಕೋಟಿ, ವಿಟ್ಲ ಬಸ್ ನಿಲ್ದಾಣಕ್ಕೆ ರು. 1.60 ಕೋಟಿ, ಪುತ್ತೂರು ಆರ್ಟಿಒ ಕಚೇರಿಗೆ ರು. 1.50 ಕೋಟಿ ಬಿಡುಗಡೆಯಾಗಿದೆ. ಪುತ್ತೂರು ಬಸ್ಸು ನಿಲ್ದಾಣದ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ವಿಟ್ಲ ಬಸ್ಸು ನಿಲ್ದಾಣದ ಕಾಂಕ್ರಿಟೀಕರಣ ಕಾಮಗಾರಿ ಅರ್ಧದಲ್ಲಿದ್ದು ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಶಿಕ್ಷಣ ಕ್ಷೇತ್ರ: ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಟ್ಟಡಕ್ಕೆ ರು. 5 ಕೋಟಿ, ವಿಟ್ಲ ಐಟಿಐ ಕಟ್ಟಡಕ್ಕೆ ರು. 3 ಕೋಟಿ, ಸರ್ಕಾರಿ ಕಾಲೇಜುಗಳಿಗೆ ಕೊಠಡಿಗಾಗಿ ರು. 84.14 ಕೋಟಿ, ಪುತ್ತೂರು ಪ್ರ.ದ. ಕಾಲೇಜು ಕಟ್ಟಡಕ್ಕೆ 2.21 ಕೋಟಿ, ನರಿಮೊಗರು ಐಟಿಐ ಕಟ್ಟಡಕ್ಕೆ ರು. 85 ಲಕ್ಷ, ಉಪ್ಪಿನಂಗಡಿ ಪ್ರ.ದ. ಕಾಲೇಜು ಕಟ್ಟಡಕ್ಕೆ ರು. 79 ಲಕ್ಷ, ಮುಕ್ರಂಪಾಡಿ ಬಾಲಕಿಯರ ಪಿಯು ಕಾಲೇಜು ಕಟ್ಟಡಕ್ಕೆ ರು. 35 ಲಕ್ಷ ವಿನಿಯೋಗಿಸಲಾಗಿದೆ.
ರಸ್ತೆ ಕಾಮಗಾರಿ...
ಪುತ್ತೂರು-ಉಪ್ಪಿನಂಗಡಿ ರಸ್ತೆ ಅಗಲೀಕರಣ ಮತ್ತು ವಿಭಾಜಕ ಅಳವಡಿಸಲು ರು. 2.80 ಕೋಟಿ, ಕಬಕ ವಿಟ್ಲ ರಸ್ತೆ ಅಭಿವೃದ್ಧಿಗೆ ರು. 4.40 ಕೋಟಿ, ಕಾವು ಈಶ್ವರಮಂಗಲ ಪಳ್ಳತ್ತಾರು ರಸ್ತೆ ಅಭಿವೃದ್ಧಿಗೆ ರು. 2.50 ಕೋಟಿ, ಅರಿಯಡ್ಕ ನಿತ್ತಿಕಲ್ ರಸ್ತೆ ಅಭಿವೃದ್ಧಿಗೆ ರು. 2.20 ಕೋಟಿ, ವಿಟ್ಲ ಉಕ್ಕುಡ ಸಾರಡ್ಕ ರಸ್ತೆ ಅಭಿವೃದ್ಧಿಗೆ 4.64 ಕೋಟಿ, ಪುರಸಭೆ ವ್ಯಾಪ್ತಿಯ ಮೀನು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯ ಪೂರ್ಣಗೊಳ್ಳದ ಕಾರಣ ಇನ್ನೂ ಈ ಸ್ಥಳಕ್ಕೆ ಮಾರುಕಟ್ಟೆ ಸ್ಥಳಾಂತರಗೊಂಡಿಲ್ಲ.