ಭಿನ್ನ ಸಾಮರ್ಥ್ಯ ಮಕ್ಕಳ ಕ್ರೀಡಾಕೂಟ ಜಾಥಾ
ಮಂಗಳೂರು: ವಿಭಿನ್ನ ಸಾಮರ್ಥ್ಯದ ಮಕ್ಕಳು ದೇವರಿಗೆ ಸಮಾನರು. ಆ ಮಕ್ಕಳಿಗೆ ಪ್ರೀತಿ ನೀಡುವ ಮೂಲಕ ಅವರೊಂದಿಗೆ ಆತ್ಮೀಯತೆ ಬೆಳೆಸಿ, ಅವರೊಂದಿಗೆ ಬೆರೆತುಕೊಳ್ಳಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಫೆ. 22 ,23 ರಂದು ನಡೆಯುವ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಗುರುವಾರ ಸಂಜೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡಿದರು.
ಇವರನ್ನು ಆಟೋಟಗಳಲ್ಲಿ ಭಾಗವಹಿಸುವಂತೆ ಹುರಿದುಂಬಿಸಬೇಕು. ಸಾನಿಧ್ಯ ಶಾಲೆಯ ಮಕ್ಕಳಲ್ಲಿ ಪ್ರೋತ್ಸಾಹ ನೀಡಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯ ಶ್ಲಾಘನೀಯ ಎಂದರು.
ರಾಜ್ಯಮಟ್ಟದ ಕ್ರೀಡಾಕೂಟ ಶಕ್ತಿನಗರದ ನಾಲ್ಯಪದವಿನ ಸರ್ಕಾರಿ ಕುವೆಂಪು ಮಾದರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಬೆಂಗಳೂರಿನ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಕಾಡೆಮಿ ಫಾರ್ ಡಿಫರೆಂಟಲಿ ಏಬಲ್ಡ್ ಸಂಸ್ಥೆ ಅಧ್ಯಕ್ಷ ರಾಕೇಶ್ ಮಲ್ಲಿ, ಕುದ್ರೋಳಿ ಶ್ರೀ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕ್ಷೇತ್ರದ ಬಿ.ಜಿ. ಸುವರ್ಣ, ಸಾನಿಧ್ಯ ಸಂಸ್ಥೆಯ ಅಧ್ಯಕ್ಷ ಮಹಾಬಲ ಮಾರ್ಲ, ಆಡಳಿತಾಧಿಕಾರಿ ವಸಂತಕುಮಾರ್ ಶೆಟ್ಟಿ ಇದ್ದರು.