ಮೂಲ್ಕಿ ತಾಲೂಕು ರಚನೆ ಆಗ್ರಹಿಸಿ ಸಿಎಂಗೆ ಮನವಿ ಸಲ್ಲಿಸಲು ನಿರ್ಧಾರ
ಮೂಲ್ಕಿ: ಮೂಲ್ಕಿ ತಾಲೂಕು ಮತ್ತು ನ್ಯಾಯಾಲಯ ಹೋರಾಟ ಸಮಿತಿ ನೇತೃತ್ವದಲ್ಲಿ ಮೂಲ್ಕಿ ತಾಲೂಕು ರಚನೆ ಹಾಗೂ ವಿಶೇಷ ತಹಸೀಲ್ದಾರ್ ನೇಮಕದ ಬಗ್ಗೆ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸ್ಥಳೀಯ ಪುನರೂರು ಟೂರಿಸ್ಟ್ ಹೋಂ ಸಭಾಂಗಣದಲ್ಲಿ ಸಭೆ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು, ಮೂಡುಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹಾಗೂ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಜೊತೆಗೂಡಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ನೇತೃತ್ವದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಬಗ್ಗೆ ನಿರ್ಧರಿಸಲಾಯಿತು.
ಮೂಲ್ಕಿ ತಾಲೂಕು ರಚನೆ ಹೋರಾಟ ಹಿನ್ನೆಲೆಯಲ್ಲಿ ಮೂಲ್ಕಿ ಹೋಬಳಿಯ 32 ಗ್ರಾಮಗಳನ್ನೊಳಗೊಂಡ ಸಮಿತಿ ರಚಿಸುವ ಬಗ್ಗೆ ಹಾಗೂ ಮೂಲ್ಕಿ ನಗರ ಪಂಚಾಯಿತಿ, ಕಿಲ್ಪಾಡಿ, ಪಡುಪಣಂಬೂರು, ಕೆಮ್ರಾಲ್, ಹಳೆಯಂಗಡಿ, ಪಡಪಣಂಬೂರು, ಐಕಳ, ಬಳ್ಕುಂಜೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿಯಲ್ಲಿ ಮೂಲ್ಕಿ ತಾಲೂಕು ರಚನೆಗೆ ಒತ್ತಾಯಿಸಿ ನಿರ್ಣಯ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಯಿತು. ಸಮಿತಿಯ ಹರೀಶ್ ಪುತ್ರನ್, ಸತೀಶ್ ಭಟ್ ಹಳೆಯಂಗಡಿ, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಶಶಿಕಾಂತ್ ಶೆಟ್ಟಿ, ಉಪಾಧ್ಯಕ್ಷ ಯೋಗೀಶ್ ಕೋಟ್ಯಾನ್, ಬಾಲಕೃಷ್ಣ ಹೆಗ್ಡೆ ಮತ್ತಿತರರು ಇದ್ದರು.