ಶಾಲಾ ಅಡುಗೆ ಸಿಬ್ಬಂದಿಗೂ ಸಮವಸ್ತ್ರ!
-ಆತ್ಮಭೂಷಣ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕಿಯರಿಗೆ ಪ್ರತ್ಯೇಕ ಉಡುಗೆ ಬಂದಿದೆ. ಬಾರ್, ರೆಸ್ಟೋರೆಂಟ್ಗಳಲ್ಲಿ ಇಂಥ ಉಡುಗೆ ಸಾಮಾನ್ಯ, ಕೆಲ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದು, ಎಲ್ಲ ಶಾಲಾ ಮಟ್ಟಕ್ಕೆ ಉಡುಗೆ ಪದ್ಧತಿ ವಿಸ್ತರಿಸಿದ್ದು ಇದೇ ಮೊದಲು.
ಜಿಲ್ಲೆಯ ಅಕ್ಷರ ದಾಸೋಹ ಸಿಬ್ಬಂದಿಗಳು ಏಪ್ರಾನ್, ಕ್ಯಾಪ್ ಹಾಗೂ ಗ್ಲೌಸ್ ಧರಿಸುತ್ತಿದ್ದಾರೆ. ಶಾಲಾ ಬಿಸಿಯೂಟದಲ್ಲಿ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಒತ್ತು ನೀಡುವ ದೃಷ್ಟಿಯಿಂದ ಉಡುಗೆ ಕ್ರಮವನ್ನು ಜಿಲ್ಲಾ ಪಂಚಾಯ್ತಿ ಅನುಷ್ಟಾನಕ್ಕೆ ತಂದಿದೆ.
ಸಂಘ ಸಂಸ್ಥೆಗಳ ನೆರವು: ಶಾಲಾ ಶೆಡ್ನಲ್ಲಿ ಬಿಸಿಯೂಟ ಸಿದ್ಧತೆ ಮಾಡುವವರು ಕೆಲವೊಮ್ಮೆ ಶುಚಿತ್ವಕ್ಕೆ ಗಮನ ಕೊಡುವುದಿಲ್ಲ ಎಂಬ ಆರೋಪಕ್ಕೆ ಉತ್ತರವಾಗಿ ಪ್ರತ್ಯೇಕ ಉಡುಗೆ ಜಾರಿಗೆ ಬಂದಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಹಳ್ಳಿ ಮಹಿಳೆಯರು ಬಿಸಿಯೂಟ ಸಿದ್ಧತೆ ಮಾಡುತ್ತಾರೆ. ಶಾಲೆಯ ತಪಾಸಣೆಗೆ ಹೋದಾಗಲೂ ಬಿಸಿಯೂಟ ಸಿದ್ಧಪಡಿಸುವವರಿಗೆ ಪ್ರತ್ಯೇಕ ಉಡುಗೆ ಸಂಹಿತೆ ಜಾರಿಗೆ ತರುವ ಬಗ್ಗೆ ಜಿಲ್ಲಾ ಪಂಚಾಯ್ತಿ ಯೋಚಿಸಿತು.
ವಿವಿಧ ಸಂಘಸಂಸ್ಥೆ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ನೆರವಿನಲ್ಲಿ ಅಡುಗೆ ಸಿಬ್ಬಂದಿಗೆ ಏಪ್ರಾನ್, ತಲೆಗೊಂದು ಕ್ಯಾಪ್ ಹಾಗೂ ಎರಡೂ ಕೈಗಳಿಗೆ ಗ್ಲೌಸ್ ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1,411 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿದ್ದು, 932 ಪ್ರಾಥಮಿಕ ಮತ್ತು 161 ಪ್ರೌಢ ಶಾಲೆಗಳ ಬಿಸಿಯೂಟ ಸಿಬ್ಬಂದಿಗೆ ಕೊಡಲಾಗಿದೆ. ಆಗಸ್ಟ್ನಲ್ಲಿ ಈ ಯೋಜನೆ ಪ್ರಾರಂಭಿಸಲಾಗಿದ್ದು, ಎಲ್ಲ ಶಾಲೆಗಳಿಗೆ ಡಿಸೆಂಬರ್ನಲ್ಲಿ ತಲುಪಿದೆ.
ತರಕಾರಿ ಹಚ್ಚುವುದು, ಅಡುಗೆ ತಯಾರಿಯಿಂದ ಬಡಿಸುವ ವರೆಗೆ ಏಪ್ರಾನ್, ಕ್ಯಾಪ್ ಮತ್ತು ಕೈಗೆ ಗ್ಲೌಸ್ ಧರಿಸಬೇಕು. ಇದನ್ನು ಕಡ್ಡಾಯಗೊಳಿಸಲಾಗಿದ್ದು, ಇದರಿಂದ ಬಿಸಿಯೂಟದಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಅಕ್ಷರ ದಾಸೋಹ ಅಧಿಕಾರಿಗಳು.
ಮುಂದಿನ ವರ್ಷ ಖಾಸಗಿ ಶಾಲೆಗೆ: ಸರ್ಕಾರಿ ಅನುದಾನದ ಖಾಸಗಿ ಶಾಲೆಗಳ ಅಕ್ಷರ ದಾಸೋಹಕ್ಕೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪ್ರತ್ಯೇಕ ಉಡುಗೆ ಒದಗಿಸಲು ಉದ್ದೇಶಿಸಲಾಗಿದೆ. ಇಂಥ 304 ಶಾಲೆಗಳಿವೆ. ಸುಳ್ಯದಲ್ಲಿ ರೋಟರಿ ಸಂಸ್ಥೆ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಮೂಡುಬಿದಿರೆಗಳಲ್ಲಿ ದಾನಿಗಳು ಮತ್ತು ಎಸ್ಡಿಎಂಸಿ ನೆರವಿನಲ್ಲಿ ಪ್ರತ್ಯೇಕ ಉಡುಗೆ ಕೊಡಲಾಗಿದೆ. ಮುಂದಿನ ವರ್ಷ ಎಲ್ಲ ಅಡುಗೆ ಸಿಬ್ಬಂದಿಗೆ ಎರಡು ಜತೆ ಉಡುಗೆ ನೀಡಲು ಯೋಚಿಸಲಾಗಿದೆ ಎನ್ನುತ್ತಾರೆ ಅಕ್ಷರ ದಾಸೋಹ ಅಧಿಕಾರಿ ಮಂಜುಳಾ.