ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಹಿರೆಬಂಡಾಡಿ: ಪವರ್ ಪ್ರಾಜೆಕ್ಟ್ ರಸ್ತೆ ಗೇಟ್ ತೆರವು

Lingaraj Badiger
Updated On : 22 Feb 2013, 11:57 am

ಉಪ್ಪಿನಂಗಡಿ: ಇಲ್ಲಿನ ಕುಮಾರಾಧಾರ ಸೇತುವೆ ಬಳಿ ಹಿರೆಬಂಡಾಡಿ ಗ್ರಾಮದ ಅಡೆಕ್ಕಲ್ ಜಲ ವಿದ್ಯುತ್ ಕಾಮಗಾರಿ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ತಾತ್ಕಾಲಿಕ ರಸ್ತೆಗೆ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಆಡಳಿತ ಗೇಟು ಅಳವಡಿಸಿ ಬೀಗ ಜಡಿದ ವಾರದೊಳಗೆ ಸಹಾಯಕ ಕಮಿಷನರ್ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಆದೇಶದನ್ವಯ ಗೇಟ್ ತೆರವುಗೊಳಿಸಲಾಗಿದೆ. ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಪ್ರಾರಂಭಗೊಂಡಿರುವ ಶ್ರೀಸಹಸ್ರಲಿಂಗೇಶ್ವರ ಪವರ್ ಪ್ರಾಜೆಕ್ಟ್ ಸಂಸ್ಥೆಯು ಕುಮಾರಧಾರ ನದಿಗೆ ಅಣೆಕಟ್ಟು ನಿರ್ಮಿಸುವ ಕಾಮಗಾರಿ ಪ್ರಾರಂಭಿಸಿತ್ತು. ಅದಕ್ಕಾಗಿ ಉಪ್ಪಿನಂಗಡಿಯಿಂದ ನದಿ ಪಾತ್ರದಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಮಧ್ಯೆ, ಉಪ್ಪಿನಂಗಡಿ ಪಂಚಾಯಿತಿ ಆಡಳಿತ ಈ ತಾತ್ಕಾಲಿಕ ರಸ್ತೆಯ ಬಳಕೆಯನ್ನು ತಪ್ಪೆಂದು ತೀರ್ಮಾನಿಸಿ ರಸ್ತೆ ಬಂದ್ ಮಾಡುವ ನಿರ್ಣಯ ಕೈಗೊಂಡಿತ್ತು. ಅದರಂತೆ ರಸ್ತೆಗೆ ಅಡ್ಡಲಾಗಿ ಗೇಟ್ ನಿರ್ಮಿಸಲಾಗಿತ್ತು. ಈ ಬಗ್ಗೆ ಸಹಾಯಕ ಕಮಿಷನರ್‌ಗೆ ದೂರು ನೀಡಿದ್ದ ಅಣೆಕಟ್ಟು ನಿರ್ಮಾಣ  ಸಂಸ್ಥೆಯು ರಸ್ತೆ ತೆರವಿಗೆ ಅಗ್ರಹಿಸಿತ್ತು. ಸರ್ವೇ ಕಾರ್ಯ ನಡೆಸಿದಾಗ ಗೇಟ್ ಅಳವಡಿಸಿದ ಭೂಮಿ ಪಂಚಾಯಿತಿ ಅಧೀನದಲ್ಲಿಲ್ಲ ಎಂಬ ವಿಚಾರ ತಿಳಿಯಿತು. ತಕ್ಷಣ ಗೇಟ್ ತೆರವಿಗೆ ಸಹಾಯಕ ಕಮಿಷನರ್ ಆದೇಶ ನೀಡಿದ್ದರು. ಈ ಆದೇಶ ಪಾಲನೆಯಾಗುವ ವಿಳಂಬತೆಯನ್ನು ಗಮನಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗೆ ತಕ್ಷಣವೇ ಗೇಟ್ ತೆರವಿಗೆ ಆದೇಶ ರವಾನಿಸಿದರು. ಅದರಂತೆ ಗುರುವಾರ ಮಧ್ಯಾಹ್ನ ಗೇಟ್ ತೆರವು ಮಾಡಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement