ದುಬೈ ಮಾರುಕಟ್ಟೆಗೆ ದಾಳಿ: ನಕಲಿ ಮೊಬೈಲ್ಗಳ ವಶ
ಮಂಗಳೂರು: ಬಂದರು ಸೆಂಟ್ರಲ್ ಮಾರುಕಟ್ಟೆ ಬಳಿಯ ದುಬೈ ಮಾರುಕಟ್ಟೆಯಲ್ಲಿ ಪ್ರಖ್ಯಾತ ಕಂಪನಿಯ ನಕಲಿ ಉತ್ಪನ್ನ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಎಸಿಪಿ ಕವಿತಾ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದೆ. ಸ್ಯಾಮ್ಸಂಗ್ ಸಂಸ್ಥೆಯ ಹೆಸರು ನಕಲು ಮಾಡಿ ಮೊಬೈಲ್ಇನ್ನಿತರ ಸೊತ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಸಂಸ್ಥೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಸ್ಯಾಮ್ಸಂಗ್ ಅಧಿಕಾರಿಗಳ ಜತೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, 7 ಅಂಗಡಿಗಳಿಗೆ ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾರಾಟ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಕಾಪಿರೈಟ್ ಕಾಯ್ದೆಯಂತೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡದೆ ಮುಚ್ಚಿಹಾಕುತ್ತಿದ್ದಾರೆ.