ನಾರಾಯಣ ಸನಿಲ್ ದತ್ತಿ ಪ್ರಶಸ್ತಿ ಪ್ರದಾನ ಇಂದು
ಮೂಲ್ಕಿ: ಹಳೆಯಂಗಡಿ ಶ್ರೀ ವಿದ್ಯಾವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾವಿನಾಯಕ ರಜತ ಸೇವಾ ಟ್ರಸ್ಟ್ ಮತ್ತು ಯುವತಿ ಹಾಗೂ ಮಹಿಳಾ ಮಂಡಲಗಳ ವಾರ್ಷಿಕೋತ್ಸವ, ಎಚ್. ನಾರಾಯಣ ಸನಿಲ್ ದತ್ತಿ ಪ್ರಶಸ್ತಿ ಮತ್ತು ದತ್ತಿ ಬಹುಮಾನ ಪ್ರದಾನ ಸಮಾರಂಭವು 23ರಂದು ಹಳೆಯಂಗಡಿಯ ವಾಸುದೇವ ಕಲಾ ವೇದಿಕೆಯಲ್ಲಿ ಜರಗಲಿರುವುದು.
ಶ್ರೀ ವಿದ್ಯಾವಿನಾಯಕ ಯುವಕ ಮಂಡಲದ 42ನೇ, ಯುವತಿ ಮತ್ತು ಮಹಿಳಾ ಮಂಡಲದ 37ನೇ ವಾರ್ಷಿಕೋತ್ಸವ ಮತ್ತು ಎಚ್. ನಾರಾಯಣ ಸನಿಲ್ ದತ್ತಿ ಪ್ರಶಸ್ತಿ ಹಾಗೂ ದತ್ತಿ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾಜಿ ಶಾಸಕ ಸುನೀಲ್ ಕುಮಾರ್ ವಹಿಸಲಿದ್ದಾರೆ.
ಎಚ್. ನಾರಾಯಣ ಸನಿಲ್ ದತ್ತಿ ಪ್ರಶಸ್ತಿಯನ್ನು ಗಣೇಶ್ ಆಚಾರ್ ಹಳೆಯಂಗಡಿಯವರಿಗೆ ಮರಣೋತ್ತರವಾಗಿ ಸುರತ್ಕಲ್ನ ಉದ್ಯಮಿ ಕಡಂಬೋಡಿ ಮಹಾಬಲ ಪೂಜಾರಿ ವಿತರಿಸಲಿದ್ದಾರೆ. ದತ್ತಿ ಬಹುಮಾನ ಪುರಸ್ಕೃತರಾದ ಪಿಯುಸಿ ವಾಣಿಜ್ಯ ವಿಭಾಗದ ವಾಣಿಶ್ರೀ ತೋಕೂರು, ರೋಶಿನಿ ಸಸಿಹಿತ್ಲು, ಕಲಾ ವಿಭಾಗದ ಸಂಗೀತ ಚೇಳಾಯರು, ಎಸ್ಎಸ್ಎಲ್ಸಿ ವಿಭಾಗದ ವರ್ಷಲ್ ಹಳೆಯಂಗಡಿ ಮತ್ತು ಐಶ್ವರ್ಯ ಚೇಳಾಯರುರಿಗೆ ಪಕ್ಷಿಕೆರೆ ಸಂತ ಜೂದರ ಚರ್ಚ್ನ ಧರ್ಮಗುರು ವಂದನೀಯ ಲೀಯೋ ಡಿ' ಸೋಜಾ ವಿತರಿಸಲಿದ್ದಾರೆ. ಧಾರ್ಮಿಕ ಪರಿಷತ್ ಸದಸ್ಯ ವಿದ್ವಾನ್ ಪಂಜ ಭಾಸ್ಕರ ಭಟ್ ದತ್ತಿ ಉಪನ್ಯಾಸ ನೀಡಲಿದ್ದಾರೆ.
ಸುರತ್ಕಲ್ನ ಉದ್ಯಮಿ ಸಂತೋಷ್ ಶೆಟ್ಟಿ ಬಹುಮಾನ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ವಿತರಿಸಲಿದ್ದು, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ವಿನು ವಿಶ್ವನಾಥ ಶೆಟ್ಟಿ ಕರಿಂಜೆ ಮತ್ತು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣೇಮಾ ಮಧು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಯುವತಿ ಮತ್ತು ಮಹಿಳಾ ಮಂಡಲದ ಸದಸ್ಯೆಯರಿಂದ ಹಾಗೂ ಅಂಗನವಾಡಿ ಮಕ್ಕಳಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಯುವಕ ಮಂಡಲದ ಸದಸ್ಯರಿಂದ ರಮೇಶ್ ಆಚಾರ್ಯ ನೂರಲ್ಬೆಟ್ಟು ರಚಿತ ತುಳು ಸಾಮಾಜಿಕ ನಾಟಕ 'ಎನ್ನ ಕಥೆ ಬರೆಪರಾ' ಪ್ರದರ್ಶಿಸಲ್ಪಡಲಿದೆ.
ವಾರ್ಷಿಕೋತ್ಸವದ ಅಂಗವಾಗಿ 23ರಂದು ಮಧ್ಯಾಹ್ನ ಯುವಕ ಮಂಡಲದ ವ್ಯಾಪ್ತಿಯ ಸ್ಥಳೀಯ ಮಕ್ಕಳಿಗೆ ಸಮೂಹ ನೃತ್ಯ ಸ್ಪರ್ಧೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.