ಫಿಲ್ಟರ್ ಅಳವಡಿಸಿದರೂ ರೊಕ್ಕ ಬಂದಿಲ್ಲ
ಆತ್ಮಭೂಷಣ್
ಮಂಗಳೂರು: ಶಾಲೆಗಳಲ್ಲಿ ಅಳವಡಿಸಿದ ಅಕ್ವಗಾರ್ಡ್ ಸ್ವಿಚ್ ಹಾಕಿದಾಗ ಮಕ್ಕಳಿಗೆ ಶುದ್ಧ ಕುಡಿವ ನೀರು ಏನೋ ಸಿಗುತ್ತದೆ, ಆದರೆ ಇದನ್ನು ಅಳವಡಿಸಿದ ಜಿಲ್ಲಾ ಪಂಚಾಯ್ತಿಗೆ ಅನುದಾನ ಮಾತ್ರ ಇನ್ನೂ ಬಂದಿಲ್ಲ.
ಇದು ಕೇಂದ್ರ ಸರ್ಕಾರ 2009-10ನೇ ಸಾಲಿನಲ್ಲಿ ಜಾರಿಗೊಳಿಸಿದ 'ಜಲ ಮಣಿ' ಯೋಜನೆಯ ಸದ್ಯದ ಸ್ಥಿತಿ.
ಈ ಯೋಜನೆಯಲ್ಲಿ ಎಲ್ಲ ಸರ್ಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಅಕ್ವಗಾರ್ಡ್ ನೀಡಲು ಕೇಂದ್ರ ಉದ್ದೇಶಿಸಿತ್ತು. ಪ್ರತಿ ಶಾಲೆಗೆ ತಲಾ ರು. 10,950ರಂತೆ ಅಕ್ವಗಾರ್ಡ್ ನೀಡಲಾಗಿತ್ತು. ವಿದ್ಯುತ್ ಇರುವಲ್ಲಿಗೆ ವಿದ್ಯುತ್ ಚಾಲಿತ, ವಿದ್ಯುತ್ ಇಲ್ಲದೆಡೆ ವಿದ್ಯುತ್ ರಹಿತ ಅಕ್ವಗಾರ್ಡ್. ಇದಕ್ಕೆ ತಲಾ ರು. 9,650. ವಿದ್ಯುತ್ ರಹಿತವಾಗಿ ಕಾರ್ಯನಿರ್ವಹಿಸುವ ಅಕ್ವಗಾರ್ಡ್ಗಳು ನೀರಿನ ಟ್ಯಾಂಕ್ನಿಂದ ನೇರವಾಗಿ ಸಂಪರ್ಕ ಪಡೆದು ಶುದ್ಧನೀರು ಕೊಡುತ್ತವೆ.
ಯಾಕಾಗಿ ಅಕ್ವಗಾರ್ಡ್?: ಬಾವಿ ನೀರು ಕುಡಿಯಲು ಯೋಗ್ಯ ಎನ್ನುವುದು ಹಿರಿಯ ನಂಬಿಕೆ. ಶಾಲೆಗಳಲ್ಲಿರುವ ಬಾವಿಯಲ್ಲಿ ಕಸಕಡ್ಡಿ ತುಂಬಿ ಸ್ವಚ್ಛಗೊಳಿಸುವುದೇ ಸವಾಲಾಗುತ್ತಿದೆ. ಹೀಗಿರುವಾಗ ಬೋರ್ವೆಲ್ ನೀರು ಇದ್ದರೂ ಅದನ್ನು ಸ್ವಚ್ಛ ನೀರಾಗಿ ಪರಿವರ್ತಿಸಿರುವುದಿಲ್ಲ.
ಶಾಲೆಗೆ ಬರುವಾಗ ಮಕ್ಕಳು ವಾಟರ್ ಕ್ಯಾನ್ ತರುವುದಿದ್ದರೂ, ಮಧ್ಯಾಹ್ನ ವೇಳೆಗೆ ನೀರು ಖಾಲಿಯಾಗಿರುತ್ತದೆ. ಮತ್ತೆ ಸಿಕ್ಕಿದ ನೀರಿಗೆ ಗಂಟಲು ಒಡ್ಡಬೇಕು. ಶುದ್ಧ ನೀರಿನ ಪೂರೈಕೆ ಇದ್ದರೆ ಮಕ್ಕಳ ಆರೋಗ್ಯಕ್ಕೆ ಉಪಯುಕ್ತ. ಆದ್ದರಿಂದ ಪ್ರತಿ ಶಾಲೆಗೂ ಶುದ್ಧ ಕುಡಿಯುವ ನೀರು ಪೂರೈಸಬೇಕು ಎಂಬ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು.
ಪ್ರಾಥಮಿಕ ಶಾಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಮಕ್ಕಳಿರುವುದರಿಂದ ಪ್ರತ್ಯೊಬ್ಬರಿಗೂ ಅಕ್ವಗಾರ್ಡ್ನಿಂದ ನೀರು ಪಡೆಯಲು ಸಾಧ್ಯವಾಗದು. ಅದಕ್ಕಾಗಿ ದೊಡ್ಡ ಡ್ರಮ್ಗೆ ಫಿಲ್ಟರ್ ಆದ ನೀರನ್ನು ತುಂಬಿಸುತ್ತಾರೆ. ಮಧ್ಯಾಹ್ನ ಬಿಸಿಯೂಟ ವೇಳೆಗೆ, ಸಂಜೆ ಆಟದ ಸಮಯಕ್ಕೆ ಕುಡಿಯಲು ವಿದ್ಯಾರ್ಥಿಗಳು ಈ ನೀರು ಬಳಸುತ್ತಾರೆ ಎನ್ನುತ್ತಾರೆ ಜಿಲ್ಲಾ ಪಂಚಾಯ್ತಿ ನೀರಾವರಿ ವಿಭಾಗದ ಅಧಿಕಾರಿ ಸತ್ಯನಾರಾಯಣ.
17.18 ಲಕ್ಷ ಬಾಕಿ: 'ಜಲ ಮಣಿ' ಯೋಜನೆಯಲ್ಲಿ ಫಿಲ್ಟರ್ ಅಳವಡಿಸುವ ಶಾಲೆಗಳಿಗೆ ಅನುದಾನ ನೀಡುವುದಾಗಿ ಕೇಂದ್ರ ತಿಳಿಸಿತ್ತು. ಅದರಂತೆ ಮೊದಲ ಹಂತದಲ್ಲಿ ಪಟ್ಟಿ ಕಳುಹಿಸಿದ ಶಾಲೆಗಳಿಗೆ ಫಿಲ್ಟರ್ಗೆ ಅನುದಾನ ಮಂಜೂರಾಗಿಯಾಗಿತ್ತು. ಹೀಗೆ ಒಟ್ಟು 412 ಶಾಲೆಗಳಿಗೆ ಫಿಲ್ಟರ್ ಅಳವಡಿಸಲಾಯಿತು. ಇದರಲ್ಲಿ 234 ಶಾಲೆಗಳಿಗೆ ರು. 12.76 ಲಕ್ಷ ವೆಚ್ಚ ಮಾಡಲಾಗಿತ್ತು. ಈ ಮೊತ್ತವನ್ನು ಕೇಂದ್ರ ನೀಡಿತ್ತು. ಆದರೆ ಕೇಂದ್ರ ಅನುದಾನ ನಿರೀಕ್ಷೆಯಲ್ಲಿ ಮತ್ತೆ 178 ಫಿಲ್ಟರ್ಗಳನ್ನು ಅಳವಡಿಸಿತ್ತು. ಇದರ ಮೊತ್ತ ರು. 17.18 ಲಕ್ಷ ಇನ್ನೂ ಬಂದಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪತ್ರ ವ್ಯವಹಾರ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಉಳಿದ ಶಾಲೆಗಳಿಗೆ ಫಿಲ್ಟರ್ ಹಾಕುವ ಕಾರ್ಯ ನೆನೆಗುದಿಗೆ ಸರಿದಿದೆ.
ಕೇಂದ್ರ ಅನುದಾನ ಬಿಡುಗಡೆಯ ನಿರೀಕ್ಷೆಯಲ್ಲಿರುವ ಅಧಿಕಾರಿಗಳು, ಉಳಿದ ಶಾಲೆಗಳಿಗೆ ಗ್ರಾಮ ಪಂಚಾಯ್ತಿ ನೆರವಿನಲ್ಲಿ ಫಿಲ್ಟರ್ ಅಳವಡಿಸುವ ಯೋಚನೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯ್ತಿ ಟ್ಯಾಂಕ್ ಅಥವಾ ಶಾಲಾ ಟ್ಯಾಂಕ್ನಿಂದ ನೀರಿನ ಸಂಪರ್ಕ ಪಡೆದು ಫಿಲ್ಟರ್ ನೀರನ್ನು ನೀಡುವ ಉದ್ದೇಶ ಹೊಂದಿದ್ದಾರೆ.