ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಂಟ್ವಾಳ ತಾಲೂಕಿಗೆ ಇನ್ನು ಇಬ್ಬರು ಸಿಡಿಪಿಒ

Mainashree
Updated On : 23 Feb 2013, 10:58 am

ಮೌನೇಶ ವಿಶ್ವಕರ್ಮ
ಬಂಟ್ವಾಳ: ಇನ್ನು ಮುಂದೆ ಬಂಟ್ವಾಳ ತಾಲೂಕಿನಲ್ಲಿ ಇಬ್ಬರು ಸಿಡಿಪಿಒ (ಶಿಶು ಅಭಿವೃದ್ಧಿ ಯೋಜನಾಧಿಕಾರಿ) ಗಳು ಕಾಣಿಸಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ಅಂಗನವಾಡಿ ಕೇಂದ್ರಗಳ ಮೂಲಕ ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತಿರುವ 185 'ಸಮಗ್ರ ಶಿಶು ಅಭಿವೃದ್ಧಿ ಸೇವೆ' (ಐಸಿಡಿಎಸ್) ಯೋಜನೆ ಪುನರ್‌ವಿಂಗಡಿಸಿದ್ದು, ಹೆಚ್ಚುವರಿ 19 ಯೋಜನೆಗಳ ಆರಂಭಕ್ಕೆ ಮಂಜೂರಾತಿ ನೀಡಿದೆ.
 ಇದರನ್ವಯ ಬಂಟ್ವಾಳ ತಾಲೂಕಿನಲ್ಲಿ ವಿಟ್ಲ ವಲಯಕ್ಕೆ ಪ್ರತ್ಯೇಕ ಸಿಡಿಪಿಒ ಹುದ್ದೆ ಹುಟ್ಟಿಕೊಂಡಿದೆ.
ಬಂಟ್ವಾಳಕ್ಕೆ ಮಾತ್ರ ಈ ಅವಕಾಶ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಹೊಂದಿರುವ ಬಂಟ್ವಾಳ ತಾಲೂಕಿಗೆ ಮಾತ್ರ ಈ ಅವಕಾಶ ಒದಗಿದ್ದು, ಈಗಾಗಲೇ ಕಾರ್ಯಾರಂಭಿಸಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಹೊಸ ಐಸಿಡಿಎಸ್ ಯೋಜನೆ ಆರಂಭಗೊಳ್ಳಲಿದ್ದು, ರಾಜ್ಯಾದ್ಯಂತ 19 ಸಿಡಿಪಿಒ ಸೇರಿದಂತೆ, ಒಟ್ಟು 76 ಹುದ್ದೆಗಳು ಸೃಷ್ಟಿಯಾಗಲಿವೆ.
ಪುನರ್‌ವಿಂಗಡಣೆ: 500ಕ್ಕೂ ಅಧಿಕ ಅಂಗನವಾಡಿಗಳನ್ನು ಹೊಂದಿರುವ ಯೋಜನಾ ವ್ಯಾಪ್ತಿಯಲ್ಲಿ ಅಂಗನವಾಡಿಗಳ ಸುವ್ಯವಸ್ಥಿತ ಪಾಲನೆ ದೃಷ್ಟಿಯಲ್ಲಿ ಈ ಯೋಜನೆ ಪುನರ್ ವಿಂಗಡಿಸಲಾಗಿದೆ.   ಬಂಟ್ವಾಳ ತಾಲೂಕಿನಲ್ಲಿ ಇನ್ನು ಮುಂದೆ ಬಂಟ್ವಾಳ ಹಾಗೂ ವಿಟ್ಲಕ್ಕೆ ಪ್ರತ್ಯೇಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಸಿಬ್ಬಂದಿ ನೇಮಿಸುವ ಕುರಿತಾಗಿಯೂ ಸರ್ಕಾರ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದೆ.   
 ಈ ಹೆಚ್ಚುವರಿ ಐಸಿಡಿಎಸ್ ಯೋಜನೆಗೆ ಕೇಂದ್ರ ಸರ್ಕಾರ ಶೇ. 90 ಹಾಗೂ ರಾಜ್ಯ ಶೇ.10 ರಷ್ಟು ಅನುದಾನ ಭರಿಸಬೇಕಿದೆ.
ವಿಟ್ಲಕ್ಕೆ ಏನಿದೆ...? ಹೊಸದಾಗಿ ಮಂಜೂರಾಗಿರುವ ವಿಟ್ಲ ಐಸಿಡಿಎಸ್ ಯೋಜನೆಗೆ ವಿಟ್ಲ ಹೋಬಳಿ ವ್ಯಾಪ್ತಿಯ ಗ್ರಾಮಪಂಚಾಯಿತಿಗಳು ಮಾತ್ರವಲ್ಲದೆ, ಕೊಳ್ನಾಡು, ಮಂಚಿ, ಕಡೇಶ್ವಾಲ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಂಗನವಾಡಿಗಳು ಸೇರ್ಪಡೆಯಾಗಲಿವೆ.   ವಿಭಜಿತವಾಗಿರುವ ಹಿಂದಿನ ಬಂಟ್ವಾಳ ಯೋಜನಾ ಕಚೇರಿಯನ್ನು ಪ್ರಸ್ತುತ ಸ್ಥಳದಲ್ಲಿಯೇ ಮುಂದುವರಿಸಲು ಸೂಚಿಸಲಾಗಿದ್ದು, ಹೊಸ ಯೋಜನಾ ಕಚೇರಿಯನ್ನು ಈಗ ಮಂಜೂರಾಗಿರುವ ಸ್ಥಳದಲ್ಲಿ ಅಥವಾ ಸೂಕ್ತ ಸ್ಥಳದಲ್ಲಿ ಪ್ರಾರಂಭಿಸುವಂತೆ ನಿರ್ದೇಶಿಸಲಾಗಿದೆ.
 ವಿಟ್ಲ ಐಸಿಡಿಎಸ್ ಯೋಜನೆಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸಾಂಖ್ಯಿಕ ಸಹಾಯಕರು, ಸಹಾಯಕರು ಅಥವಾ ಬೆರಳಚ್ಚುಗಾರರನ್ನು  ಇಲಾಖೆಯ ಸಿಆಂಡ್‌ಆರ್  ಅನ್ವಯ ನೇಮಕಾತಿ ಮಾಡಿಕೊಳ್ಳಬಹುದು ಎಂದು ತಿಳಿಸಿರುವ ಇಲಾಖೆ, ಸೇವಕ, ಜವಾನ ಹುದ್ದೆಯನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲು ಆದೇಶಿಸಿದೆ. ಕಚೇರಿಗೆ ಅಗತ್ಯವಿರುವ ಪೀಠೋಪಕರಣಗಳ ಖರೀದಿಗೂ ಮಾರ್ಗಸೂಚಿ ಹೊರಡಿಸಿದೆ.
ಏನು ಲಾಭ: ಬಂಟ್ವಾಳ ಐಸಿಡಿಎಸ್ ಯೋಜನೆಗೆ ಈ ಪುನರ್ ವಿಂಗಡಣೆಯಿಂದ ಅನುಕೂಲವಾಗಿದೆ.  ಅಂಗನವಾಡಿ ಕೇಂದ್ರಗಳ ಹಂಚಿಕೆಯಾಗಿರುವುದರಿಂದ ಸಿಡಿಪಿಒ ಕಚೇರಿ ಅಧಿಕಾರಿಗಳ ಕೆಲಸದ ಒತ್ತಡ ಕಡಿಮೆಯಾಗಲಿದೆ ಎಂದು ಬಂಟ್ವಾಳ ಸಿಡಿಪಿಒ ಉಸ್ಮಾನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement