ಮಾದಕ ದ್ರವ್ಯ ಮಾರಾಟ: ಮೂವರ ಸೆರೆ
ಮಣಿಪಾಲ: ಇಲ್ಲಿನ ವಿದ್ಯಾರ್ಥಿಗಳು ಮಾದಕ ದ್ರವ್ಯ ಸೇವನೆಯ ಚಟಕ್ಕೆ ಬಲಿಯಾಗಿರುವುದು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇರುತ್ತದೆ. ಅಂತಹ ಒಂದು ಘಟನೆ ಗುರುವಾರ ಮತ್ತೇ ಬಹಿರಂಗವಾಗಿದೆ. ಇಲ್ಲಿನ ಮಣ್ಣಪಳ್ಳದ ಬಳಿ ಗುರುವಾರ ಬೆಳಗ್ಗೆ 10.40 ಗಂಟೆಗೆ ದಾಳಿ ನಡೆಸಿದ ಪೊಲೀಸರು 3 ಮಂದಿ ಆರೋಪಿಗಳನ್ನು ಮಾದಕ ದ್ರವ್ಯಗಳ ಸಹಿತ ಬಂಧಿಸಿದ್ದಾರೆ. ಇವರು ಇಲ್ಲಿನ ವಿದ್ಯಾರ್ಥಿಗಳಿಗೆ ಈ ಮಾದಕ ದ್ರವ್ಯಗಳನ್ನು ಪೂರೈಸುತ್ತಿದ್ದರು. ಖಚಿತ ಮಾಹಿತಿಯಂತೆ ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ಸದಾನಂದ ಎ.ಟಿ. ಮತ್ತು ಸಿಬ್ಬಂದಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ದೇವನಹಳ್ಳಿಯ ಗೋವಿಂದ ಸ್ವಾಮಿ (37), ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಬಿ.ಆರ್.ಟಿ. ಕಾಲನಿಯ ಅಣ್ಣಪ್ಪ (29) ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಣ್ಣೂರು ಗ್ರಾಮದ ಧರ್ಮಪ್ಪ (50) ಅವರನ್ನು ಬಂಧಿಸಿದ್ದಾರೆ. ಆಗ ಅವರ ಬಳಿ 2,300 ಗ್ರಾಂ ಗಾಂಜಾ ಮತ್ತು ರು. 2000 ನಗದು ವಶಪಡಿಸಿಕೊಳ್ಳಲಾಗಿದೆ. ಅವರು ವಿದ್ಯಾರ್ಥಿಗಳಿಗೆ ಈ ಗಾಂಜಾವನ್ನು ಮಾರಾಟ ಮಾಡಲು ಇಲ್ಲಿ ಕಾದು ಕುಳಿತಿದ್ದರು. ಅವರು ಈ ಅಕ್ರಮ ದಂಧೆಗೆ ಕಾರು ಬಳಸುತ್ತಿದ್ದರು. ಅವರ ಬಳಿ 4 ಮೊಬೈಲು, 5 ಎಂಟಿಎಂ ಕಾರ್ಡುಗಳೂ ಪತ್ತೆಯಾಗಿವೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.