ಮೂಡುಬಿದಿರೆ: ನಾಳೆ ಪ್ರಾಕೃತ ಭಾಷೆ ಅಧ್ಯಯನ ಶಿಬಿರ
ಬೆಳ್ತಂಗಡಿ: ಅಳಿಯುತ್ತಿರುವ ಭಾರತೀಯ ಭಾಷೆಗಳನ್ನು ಪುನರುತ್ಥಾನಗೊಳಿಸುವ ದೃಷ್ಟಿಯಿಂದ ಮೂಡುಬಿದರೆಯಲ್ಲಿ ಫೆ. 24 ರಂದು ರಾಷ್ಟ್ರೀಯ ಪ್ರಾಕೃತ ಅಧ್ಯಯನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೂಡುಬಿದರೆ ಜೈನ ಮಠದ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ತಿಳಿಸಿದರು.
ಅವರು ಶುಕ್ರವಾರ ರಾತ್ರಿ ಪೆರಿಂಜೆ ಬಸದಿಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಾಗಾರದ ಬಗ್ಗೆ ವಿವರಿಸಿದರು.
ಮೂಡುಬಿದರೆಯ ಧವಲತ್ರಯ ಟ್ರಸ್ಟ್ ವತಿಯಿಂದ ಒಂದು ದಿನದ ಕಾರ್ಯಾಗಾರದಲ್ಲಿ ಭಾಗವಹಿಸಲು 80 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಈಗಾಗಲೇ ಹಲವು ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ಆಸಕ್ತ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಉಚಿತ ಊಟ, ವಸತಿ ಒದಗಿಸಿಕೊಡಲಾಗುತ್ತದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.
ಕಳೆದ ಬಾರಿ ತುಳು ಭಾಷಾ ಶಿಬಿರವನ್ನು ನಡೆಸಲಾಗಿತ್ತು. ಈ ಬಾರಿ ಉತ್ತರ ಭಾರತದಲ್ಲಿ ಪ್ರಚಲಿತವಿದ್ದ ಅರ್ಧಮಾಗಧಿ ಭಾಷೆಯಾಗಿರುವ ಪ್ರಾಕೃತ ಭಾಷೆಯ ಅಧ್ಯಯನ ನಡೆಸಲಾಗುವುದು. ಮರೆತು ಹೋಗುತ್ತಿರುವ ಭಾಷೆಗಳನ್ನು ಪುನರುಜ್ಜೀವನಗೊಳಿಸುವುದು ಇಂದಿನ ಅಗತ್ಯವಾಗಿದೆ. ಭಾಷೆ ನಶಿಸಿಹೋದಂತೆ ಒಂದು ಸಂಸ್ಕೃತಿ ಪರಂಪರೆಯೂ ಅವನತಿ ಹೊಂದುವುದು ಎಂದರು.
ಅಧ್ಯಯನ ಶಿಬಿರದಲ್ಲಿ ಬಿಹಾರದ ವಿದ್ವಾನ್ ತಾರನ್ ದ್ವಿವೇದಿ, ಮೈಸೂರಿನ ಶರಶ್ಚಂದ್ರ ಭಾಗವಹಿಸಲಿದ್ದಾರೆ ಎಂದು ಶ್ರೀಗಳು ವಿವರಿಸಿದರು. ಕಾರ್ಯಾಗಾರದ ಸಂಚಾಲಕ ಡಾ. ಉಮಾನಾಥ ಶೆಣೈ ಪೂರಕ ಮಾಹಿತಿ ನೀಡಿದರು.