'ಶುಭದಿನ' ಶುಕ್ರವಾರ ನಾಮಪತ್ರಗಳ ಮಹಾಪೂರ
ಉಡುಪಿ: ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾಮಪತ್ರ ಸಲ್ಲಿಸಲು 7ನೇ ದಿನವಾದ ಶುಕ್ರವಾರ 'ಒಳ್ಳೆಯ ದಿನ' ಎಂಬ ಕಾರಣಕ್ಕಾಗಿ ಭಾರಿ ಸಂಖ್ಯೆಯಲ್ಲಿ ನಾಮಪತ್ರಗಳು ಸಲ್ಲಿಕೆಯಾಗಿವೆ.
ಕಳೆದ 6 ದಿನಗಳಲ್ಲಿ ಸಲ್ಲಿಕೆಯಾದ ಒಂದೆರಡು ನಾಮಪತ್ರಗಳನ್ನು ಸ್ವೀಕರಿಸಿ ಆರಾಮದಲ್ಲಿದ್ದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಿಶ್ರಾಂತಿ ಇಲ್ಲದೆ ಕೆಲಸ ಮಾಡುವಂತಾಯಿತು.
221 ನಾಮಪತ್ರ: ಜಿಲ್ಲೆಯಲ್ಲಿ ಇದುವರೆಗೆ 1 ನಗರಸಭೆ, 2 ಪುರಸಭೆ ಮತ್ತು 1 ಪಟ್ಟಣ ಪಂಚಾಯಿತಿ ಸೇರಿ 4 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 221 ನಾಮಪತ್ರ ಸಲ್ಲಿಕೆಯಾಗಿರುತ್ತದೆ. ಅದರಲ್ಲಿ ಶುಕ್ರವಾರವೊಂದೇ ದಿನದಲ್ಲಿ 202 ನಾಮಪತ್ರಗಳು ಸಲ್ಲಿಕೆಯಾಗಿವೆ.
ಉಡುಪಿ ನಗರಸಭೆಗೆ 68 ನಾಮಪತ್ರ ಸಲ್ಲಿಕೆಯಾಗಿದ್ದು, ಅದರಲ್ಲಿ ಕಾಂಗ್ರೆಸ್ನಿಂದ 22, ಬಿಜೆಪಿಯಿಂದ 37, ಜೆಡಿಎಸ್ ಪಕ್ಷದಿಂದ 6 ಮತ್ತು ಪಕ್ಷೇತರ 3 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ.
ಕಾರ್ಕಳ ಪುರಸಭೆಗೆ 49 ನಾಮಪತ್ರ ಸಲ್ಲಿಕೆಯಾಗಿದ್ದು ಬಿಜೆಪಿಯಿಂದ 22, ಕಾಂಗ್ರೆಸ್ನಿಂದ 17, ಜೆಡಿಎಸ್ ಪಕ್ಷದಿಂದ 6 ಮತ್ತು 6 ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ.
ಕುಂದಾಪುರ ಪುರಸಭೆಗೆ ಒಟ್ಟು 62 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರಸ್ನಿಂದ 19, ಬಿಜೆಪಿಯಿಂದ 32, ಜೆಡಿಎಸ್ ಪಕ್ಷದಿಂದ 3, ಸಿಪಿಎಂನಿಂದ 6, ಮತ್ತು 2 ಮಂದಿ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ.
ಸಾಲಿಗ್ರಾಮ ಪಟ್ಟಣ ಪಂಚಾಯಿತಿಗೆ ಒಟ್ಟು 23 ನಾಮಪತ್ರ ಸಲ್ಲಿಕೆಯಾಗಿದ್ದು, ಕಾಂಗ್ರೆಸ್ನಿಂದ 7, ಬಿಜೆಪಿಯಿಂದ 14 ಹಾಗೂ ಬಿ.ಎಸ್.ಆರ್. ಕಾಂಗ್ರೆಸ್ ಪಕ್ಷದಿಂದ 2 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುತ್ತಾರೆ.
ಇಂದು ಗಡುವು: ನಾಮಪತ್ರ ಸಲ್ಲಿಕೆಗೆ ಶನಿವಾರ ಕೊನೆಯ ದಿನವಾಗಿದೆ, ನಾಮಪತ್ರಗಳ ಪರಿಶೀಲನೆ 25ರಂದು ನಡೆಯಲಿದೆ. 27ರಂದು ನಾಮಪತ್ರ ಹಿಂದೆ ಪಡೆಯಲು ಅಂತಿಮ ದಿನವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ. ಟಿ. ರೇಜು ತಿಳಿಸಿದ್ದಾರೆ.