ಸುದ್ದಿ ಸಂಕ್ಷೇಪ
ಬಂಟ್ವಾಳ ಪುರಸಭೆ- 76 ನಾಮಪತ್ರ
ಬಂಟ್ವಾಳ: ಬಂಟ್ವಾಳ ಪುರಸಭೆಗೆ ಮಾ. 7 ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಶುಕ್ರವಾರ ಒಂದೇ ದಿನ 76 ನಾಮಪತ್ರಗಳು ಸಲ್ಲಿಕೆಯಾಗಿದೆ. 23 ವಾರ್ಡ್ಗಳನ್ನು ಹೊಂದಿರುವ ಬಂಟ್ವಾಳ ಪುರಸಭೆಯ 22 ವಾರ್ಡ್ಗಳಿಗೆ ವಿವಿಧ ಪಕ್ಷದ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಗುರುವಾರ ಸಲ್ಲಿಕೆಯಾದ ನಾಲ್ಕು ನಾಮಪತ್ರಗಳು ಸೇರಿದಂತೆ ಈವರೆಗೆ ಒಟ್ಟು 81 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.
ಈ ಪೈಕಿ ಕಾಂಗ್ರೆಸ್ನ 23, ಬಿಜೆಪಿಯ 27, ಜೆಡಿಎಸ್ನಿಂದ 6, ಕೆಜೆಪಿ, ಸಿಪಿಐ, ಸಿಪಿಎಂ ತಲಾ ಎರಡು, ಎಸ್ಡಿಪಿಐ 14 ಹಾಗೂ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರ ಸಲ್ಲಿಕೆಗೆ ಕೊನಯ ದಿನವಾಗಿದ್ದು, ವಿವಿಧ ಪಕ್ಷಗಳಿಂದ ನಾಮಪತ್ರ ಸಲ್ಲಿಕೆಯಾಗುವ ನಿರೀಕ್ಷೆ ಇದೆ. ಈಗಾಗಲೇ ನಾಮಪತ್ರ ಸಲ್ಲಿಸಿದವರ ಪೈಕಿ ಹಾಲಿ ಪುರಸಭಾದ್ಯಕ್ಷ ದಿನೇಶ್ ಭಂಡಾರಿ ಪ್ರಮುಖರಾಗಿದ್ದಾರೆ. ಈ ನಡುವೆ ಕಳೆದ ಎರಡು ಅವಧಿಯಲ್ಲಿ ಮುಸ್ಲಿಂ ಲೀಗ್ನಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದ ಅಮಿನಾಬಿ ಶೇಖ್ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮರು ಆಯ್ಕೆ ಬಯಸಿ ತಮ್ಮ ಸ್ವ ವಾರ್ಡ್ನಿಂದಲೇ ಸ್ಪರ್ಧಿಸಲಿದ್ದಾರೆ.
ಪುತ್ತೂರು ಪುರಸಭೆ : 5 ನಾಮಪತ್ರ
ಪುತ್ತೂರು: ಪುತ್ತೂರು ಪುರಸಭಾ ಚುನಾವಣೆಯು ನಿಧಾನವಾಗಿ ಕಾವೇರುತ್ತಿದ್ದು ಬುಧವಾರದ ತನಕ ಹಾಲಿ ಸದಸ್ಯರೊಬ್ಬರು ಸೇರಿದಂತೆ ಒಟ್ಟು 4 ಮಂದಿ ಅಭ್ಯರ್ಥಿಗಳು 5 ನಾಪಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯುತ್ತಿದ್ದು 6ನೇ ವಾರ್ಡ್ ಚಿಕ್ಕಮುಡ್ನೂರು ಕ್ಷೇತ್ರದಿಂದ ಹಾಲಿ ಸದಸ್ಯ ಕಾಂಗ್ರೆಸ್ನ ಜಗದೀಶ ನೆಲ್ಲಿಕಟ್ಟೆಯವರು ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.
ಗಣೇಶ್ಗೌಡ ಎಂಬವರು ಬಿಜೆಪಿಯಿಂದ ಮತ್ತು ಪಕ್ಷೇತರರಾಗಿ 2 ನಾಮಪತ್ರ ಸಲ್ಲಿಸಿದ್ದು ಇವರು 3ನೇ ವಾರ್ಡ್ ಪಡ್ನೂರು ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ. 5ನೇ ವಾರ್ಡ್ ಬನ್ನೂರಿನಿಂದ ಜಾತ್ಯತೀತ ಜನತಾ ದಳದ ಪದ್ಮಾ ಮಣಿಯನ್ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪುರಸಭಾ ಚುನಾವಣೆ ಎದುರಿಸಲು ಸಿದ್ಧರಾಗಿದ್ದು ಈಗಾಗಲೇ ಮಾಧ್ಯಮಗಳ ಮೂಲಕ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಜತೆಗೆ ಕ್ಷೇತ್ರ ಸಂಚಾರದಲ್ಲಿಯೂ ತೊಡಗಿದ್ದಾರೆ.
ಪುತ್ತೂರು ಪುರಸಭಾ ವ್ಯಾಪ್ತಿಯಲ್ಲಿ 27 ವಾರ್ಡ್ಗಳಿದ್ದು 27 ಸದಸ್ಯ ಬಲವನ್ನು ಹೊಂದಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ 15 ಮತ್ತು ಕಾಂಗ್ರೆಸ್ನಿಂದ 12 ಮಂದಿ ಸದಸ್ಯರು ಆಯ್ಕೆಯಾಗಿದ್ದರು. ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಿತ್ತು.
ಇಂದು ಸುಳ್ಯದಲ್ಲಿ ಡ್ಯಾನ್ಸ್ ಸ್ಪರ್ಧೆ
ಸುಳ್ಯ: ತುಳು ಜಾನಪದ ಸಂಸ್ಕೃತಿಯನ್ನು ನೃತ್ಯದ ಮೂಲಕ ಪ್ರದರ್ಶಿಸುತ್ತ ಸುಳ್ಯದಲ್ಲಿ ಜನಮನ್ನಣೆ ಗಳಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸುಳ್ಯದ ಮಂಜು ಬ್ರದರ್ಸ್ ಡ್ಯಾನ್ಸ್ ತಂಡದ 24ನೇ ವಾರ್ಷಿಕೋತ್ಸವ ಅಂಗವಾಗಿ ಫೆ.23ರಂದು ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯನ್ನು ಸುಳ್ಯದಲ್ಲಿ ಏರ್ಪಡಿಸಲಾಗಿದೆ. ಮಂಜು ಬ್ರದರ್ಸ್ ತಂಡದ ಸಂಚಾಲಕ ಮಂಜು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನಟೋರಿಯಸ್ ಎಂಬ ರಾಜ್ಯಮಟ್ಟದ ಡ್ಯಾನ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದೇ ಸಂದರ್ಭ ನಟೋರಿಯಸ್ ಚಲನಚಿತ್ರದ ಧ್ವನಿ ಸುರುಳಿ ಬಿಡುಗಡೆ ನಡೆಯುವುದು ಎಂದು ತಿಳಿಸಿದರು. ಗೋಷ್ಠಿಯಲ್ಲಿ ಸುರೇಶ್ ಕೊಡಿಯಲ್ಬೈಲ್, ಗಿರೀಶ್ ಜಟ್ಟಿಪಳ್ಳ, ರಾಜಶೇಖರ, ಮಂಜು ಸುಳ್ಯ ಇದ್ದರು.