ಆರಕ್ಕೇರದ ಮೂರಕ್ಕಿಳಿಯದ ಸುಳ್ಯ
ಬಾಲಕೃಷ್ಣ ಭೀಮಗುಳಿ
ಸುಬ್ರಹ್ಮಣ್ಯ: ಮೀಸಲು ಕ್ಷೇತ್ರವಾದ ಸುಳ್ಯ ಸತತ ನಾಲ್ಕು ಬಾರಿ ಪ್ರತಿನಿಧಿಸುತ್ತಿರುವ ಶಾಸಕ ಎಸ್. ಅಂಗಾರ ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದ್ದರೂ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಪ್ರಗತಿಯಾಗಬೇಕಿದೆ.
ಅದರಲ್ಲೂ ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿಲ್ಲ ಎಂಬ ಅಪವಾದ ಕೇಳಿಬರುತ್ತಿದೆ. ಮಿನಿ ವಿಧಾನ ಸೌಧದ ಕಚೇರಿಯಲ್ಲಿ ಬಹುತೇಕ ಕಚೇರಿಗಳು ಇರಬೇಕಿತ್ತು. ಆದರೆ, ಸರ್ವೆ, ಕಂದಾಯ, ಸಬ್‌ರಿಜಿಸ್ಟಾರ್ ಕಚೇರಿಗಳು ಮಾತ್ರ ಕಾರ್ಯಾಚರಿಸುತ್ತಿವೆ.
ವಿದ್ಯುತ್ ಪೂರೈಕೆಗೆ ಈಗ 33 ಕೆ.ವಿ. ಸಬ್‌ಸ್ಟೇಷನ್ ಇದೆ. 110 ಕೆ.ವಿ. ಸಬ್ ಸ್ಟೇಷನ್ ಸರ್ವೆ ನಡೆಸಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಸುಳ್ಯ ಕೇಂದ್ರ ಮತ್ತು ಸುಬ್ರಹ್ಮಣ್ಯದಲ್ಲಿ ಕೆಎಸ್‌ಆರ್‌ಟಿಸಿ ಡಿಪ್ಪೋ ಬಹುಕಾಲದ ಬೇಡಿಕೆ ಬಾಕಿ ಆಗಿದೆ. ಸುಳ್ಯದಲ್ಲಿ ಜಾಗ ನೋಡಿದ್ದರೂ ಖಾಸಗಿ ಆಕ್ಷೇಪದಿಂದ ಇನ್ನೂ ಆಗಿಲ್ಲ. ಒಳಚರಂಡಿ ಮಂಡಳಿ 2002ರಲ್ಲಿ ರು. 2- 3 ಕೋಟಿ ವೆಚ್ಚದಲ್ಲಿ ಆರಂಭಿಸಿದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಜಟ್ಟಿಪಳ್ಳ ವಾಟರ್ ಲಿಪ್ಟಿಂಗ್ ಪೂರ್ಣವಾಗಿಲ್ಲ. ಜಯನಗರ ಪ್ಲಾಂಟ್‌ಗೂ ಇನ್ನೂ ಲಿಂಕ್ ಪಡೆದಿಲ್ಲ. ಶೇ.80 ಕೆಲಸ ಆಗಿದ್ದರೂ ಬಾಕಿ ಶೇ.20 ಕೆಲಸ ಆಗದೆ ಪ್ರಯೋಜನ ಇಲ್ಲ. ಮುಖ್ಯ ರಸ್ತೆಯ ಹೊರಚರಂಡಿ ಕಾಮಗಾರಿ ಆರಂಭಗೊಂಡು ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗಿದೆ.
ಟೆಂಡರ್, ಕಾಮಗಾರಿ ಪ್ರಕ್ರಿಯೆ ಪ್ರಗತಿಯಲ್ಲಿ: ಸುಬ್ರಹ್ಮಣ್ಯ ಕುಮಾರಧಾರ ಸೇತುವೆ ನಿರ್ಮಾಣ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸುಳ್ಯ -ಸುಬ್ರಹ್ಮಣ್ಯ ಪ್ರಮುಖ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಮಂಡೆಕೋಲಿನಲ್ಲಿ ಎರಡು ಗ್ರಾಮ ಸೇರುವ ಕೇಂದ್ರದ ಮೂರೂರು ಎಂಬಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ.
ಸಮಸ್ಯೆಗಳೂ ಇವೆ: ಕಾಡಾನೆ ಹಾವಾಳಿ, ಲೋ ವೋಲ್ಟೇಜ್ ಸಮಸ್ಯೆ ಸೇರಿದಂತೆ ಹತ್ತು ಹಲವು ಮೂಲಭೂತ ಸಮಸ್ಯೆ ಈ ಕ್ಷೇತ್ರದ ಜನಸಾಮಾನ್ಯರನ್ನು ಎದರಿಸುತ್ತಿದ್ದು, ಈ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಶಾಸಕರು ವಿಫಲರಾಗಿದ್ದಾರೆ.
ಅಭಿವೃದ್ಧಿಯ ದೃಷ್ಟಿಯಲ್ಲಿ ಕ್ಷೇತ್ರವನ್ನು ಕಂಡಾಗ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅಂಗಾರರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ.
ಮಿನಿ ವಿಧಾನ ಸೌಧ ಸ್ಥಾಪನೆ, ರಸ್ತೆಗಳ ನಿರ್ಮಾಣ, ಶಿಕ್ಷಣಕ್ಕೆ ಆದ್ಯತೆ, ಸಾರಿಗೆ ಕಾಮಗಾರಿಗಳು ಭರದಿಂದ ಸಾಗಿವೆ. ಬಹುತೇಕ ರಸ್ತೆಗಳು ಡಾಂಬರು ಕಂಡಿವೆ. ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ವಿನಿಯೋಗಿಸಿದ್ದರೂ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳದಿರಿರುವುದು ಇವರ ಅಧಿಕಾರದ ಅವಧಿಯಲ್ಲಿ ಪ್ರಗತಿ ನಿಧಾನಗತಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಒಂದು ನಿದರ್ಶನ.