ದೋಣಿ ವಿಹಾರದಲ್ಲಿ ಏಡ್ಸ್ ಜಾಗೃತಿ
ಮಂಗಳೂರು: ಸುಲ್ತಾನ್ ಬತ್ತೇರಿಯ ನದಿ ತೀರವನ್ನು ದೋಣಿಯಲ್ಲಿ ದಾಟಿ ಸಮುದ್ರ ವೀಕ್ಷಿಸಲು ತೆರಳುವ ಯುವ ಜನತೆ, ಗ್ರಾಮಸ್ಥರಿಗೆ ಶನಿವಾರ ಮಧ್ಯಾಹ್ನ ಆಶ್ಚರ್ಯವೊಂದು ಕಾದಿತ್ತು. ದೋಣಿ ಪ್ರವೇಶಿಸಿ ಕುಳಿತು ತಟ್ಟನೆ ದೃಷ್ಟಿ ಹಾಯಿಸಿದಾಗ ಅಲ್ಲಿ ಒಂದು ಗುಂಪು 'ನಮ್ಮ ಆರೋಗ್ಯ ದೇಶದ ಭವಿಷ್ಯ'ವೆಂಬ ಕರಪತ್ರ ಕೈಗೆ ನೀಡಿದರು. ಅಲ್ಲದೆ ದೋಣಿಯೊಳಗೆ ಒಬ್ಬ ಮಹಿಳೆ ಏಡ್ಸ್‌ನ ಪರಿಣಾಮ, ಅದರ ಕುರಿತು ಮಾಹಿತಿ ನೀಡುತ್ತಿದ್ದರು.
ಸಂತ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ವಿದ್ಯಾರ್ಥಿಗಳು ಹಾಗೂ ಬೋಳೂರು ಮೊಗವೀರ ಮಹಾಸಭಾ ಹಾಗೂ ಹೊಂಗಿರಣ ನೆಟ್‌ವರ್ಕ್ ಆಫ್ ಫಾಸಿಟಿವ್ ಪೀಪಲ್ ವತಿಯಿಂದ ದೋಣಿ ವಿಹಾರದಲ್ಲಿ ಏಡ್ಸ್ ಕುರಿತು ಜನಜಾಗೃತಿ ಮೂಡಿಸುವ 'ನಿರ್ಮೂಲನಾ' ಕಾರ್ಯಕ್ರಮ ನಡೆಸಿದ ಪರಿ ಇದು.
ಹೊಂಗಿರಣ ಸಂಸ್ಥೆಯ ಸೀಮಾ ಅವರು ಮಾತನಾಡಿ, ಎಚ್‌ಐವಿ ಮತ್ತು ಏಡ್ಸ್‌ಗೆ ವ್ಯತ್ಯಾಸವಿದೆ. ಎಚ್‌ಐವಿ ಸೋಂಕಿತರು ಸಾಮಾನ್ಯರಂತೆ ಬದುಕು ಸಾಗಿಸಲು ಸಾಧ್ಯ. ಆದರೆ ಇದಕ್ಕೆ ಮಾನಸಿಕ ಧೈರ್ಯ ಮುಖ್ಯ. ಸರಿಯಾದ ಮಾಹಿತಿಯಿಂದ ಮನಸ್ಸು ನಿರಾಳವಾಗುತ್ತದೆ. ಯುವ ಜನತೆ ಹೆಚ್ಚು ತಿಳಿದುಕೊಳ್ಳುವ ಅವಶ್ಯವಿದೆ ಎಂದರು.
ಸಹರಾ ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ. ಸಂಗೀತ ಲಕ್ಷ್ಮಿ, ಇಂಥ ಕಾರ್ಯಕ್ರಮ ಜಿಲ್ಲೆಯಲ್ಲಿ ಕಾಲೇಜಿನಲ್ಲಿ ಮಾಡಿರುವುದು ಶ್ಲಾಘನೀಯ. ಎಚ್‌ಐವಿ ಒಂದು ವೈರಸ್ ಆಗಿದ್ದು, ಸೋಂಕು ಇದ್ದರೂ 10-12 ವರ್ಷ ಇದರ ಗುಣಲಕ್ಷಣ ತೋರಿಸುವುದಿಲ್ಲ. ಎಚ್‌ಐವಿಯಿಂದ ಯಾರೂ ಸಾವನ್ನಪ್ಪುತ್ತಿಲ್ಲ. ಆದರೆ ಎಚ್‌ಐವಿ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಇತರ ಕಾಯಿಲೆಗಳು ಉಂಟಾಗಿ ಸಾವನ್ನಪ್ಪುತ್ತಾರೆ ಎಂದರು.
ಜಿಲ್ಲೆಯಲ್ಲಿ ಎಚ್‌ಐವಿ ನಿಯಂತ್ರಿಸುವ ಚಿಕಿತ್ಸೆ(ಎಆರ್‌ಟಿ)ಯನ್ನು 4,100 ಮಂದಿ ಪಡೆಯುತ್ತಿದ್ದಾರೆ. ಐಟಿಸಿಟಿ ಸಂಸ್ಥೆಯಲ್ಲಿ ಉಚಿತ ಮಾರ್ಗದರ್ಶನ, ಮಾಹಿತಿ ನೀಡುವುದರ ಜತೆಗೆ ಗೌಪ್ಯತೆ ಕಾಪಾಡುತ್ತಾರೆ. ಎಚ್‌ಐವಿ ಸೋಂಕಿತರಲ್ಲಿ ಶೇ. 31 ಮಂದಿ ಯುವಜನತೆಯಾಗಿರುತ್ತಾರೆ ಎಂದರು.
ದೋಣಿ ವಿಹಾರದಲ್ಲಿ ಸುಮಾರು 2.30 ಗಂಟೆಗಳ ಅವಧಿಯಲ್ಲಿ ದೋಣಿ ವಿಹಾರೊಂದಿಗೆ ಅದರಲ್ಲಿ ಸಾಗುವ ಜನರಿಗೆ ಮಾಹಿತಿ ನೀಡಲಾಯಿತು. ಸುಲ್ತಾನ್ ಬತ್ತೇರಿಯಲ್ಲಿ ಯುವಜನತೆ ಹೆಚ್ಚು ಓಡಾಡುವುದರಿಂದ ಏಡ್ಸ್ ಜಾಗೃತಿ ಕಾರ್ಯಕ್ರಮ ನಡೆಸಲು ಸೂಕ್ತ ಪ್ರದೇಶವೆಂದು ಆರಿಸಲಾಯಿತು ಎಂದು ಕಾಲೇಜಿನ ವಿದ್ಯಾರ್ಥಿ ಕಿರಣ್ ಶೆಣೈ ಪ್ರತಿಕ್ರಿಯಿಸಿದರು. ಮೊಗವೀರ ಮಹಾಸಭಾದ ಸದಸ್ಯರಾದ ದೇವಾನಂದ ಗುಜರನ್, ಮಾಧವ ಸಾಲ್ಯಾನ್, ಕಾಲೇಜಿನ ಉಪನ್ಯಾಸಕಿ ಲಕ್ಷ್ಮಿ ಶೆಣೈ, ವಿದ್ಯಾರ್ಥಿಗಳಿದ್ದರು.