ಪಾಲಿಕೆ ಚುನಾವಣೆ: 14 ಸ್ಥಾನಗಳಿಗೆ ಸಿಪಿಎಂ ಸ್ಪರ್ಧೆ
ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ 14 ಸ್ಥಾನಗಳಲ್ಲಿ ಸಿಪಿಎಂ ಸ್ಪರ್ಧಿಸಲಿದೆ ಎಂದು ನಗರ ಸಮಿತಿ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಪಕ್ಷ 5 ಸ್ಥಾನಗಳಲ್ಲಿ ಸ್ಪರ್ಧೆಗಿಳಿದು ಒಂದು ಸ್ಥಾನದಲ್ಲಿ ಜಯಗಳಿಸಿ, ಉಳಿದೆರಡು ಸ್ಥಾನಗಳಲ್ಲಿ ನೇರ ಪೈಪೋಟಿ ಎದುರಿಸಿತ್ತು. ಕಳೆದ ಬಾರಿಯಂತೆ ಈ ಸಲವೂ ಯಾವುದೇ ಪಕ್ಷದ ಜತೆ ಚುನಾವಣಾ ಮೈತ್ರಿ ನಡೆಸುವುದಿಲ್ಲ ಎಂದರು. ಕಳೆದ ಐದು ವರ್ಷದಲ್ಲಿ ಪಾಲಿಕೆಯ ಬಿಜೆಪಿ ಆಡಳಿತದ ಜನವಿರೋಧಿ ನೀತಿ ವಿರುದ್ಧ ಸುಮಾರು 43 ಬಾರಿ ಪ್ರತಿಭಟನೆ ಸಂಘಟಿಸಿದೆ. ದಲಿತ ಹಕ್ಕುಗಳ ಸಮಿತಿ ಮೂಲಕ ಅನೇಕ ಹೋರಾಟಗಳನ್ನು ನಡೆಸಿದೆ. ಬೀದಿ ಬದಿ ವ್ಯಾಪಾರಸ್ಥರ ವಿರುದ್ಧದ ಟೈಗರ್ ಕಾರ್ಯಾಚರಣೆ ವಿರುದ್ಧವೂ ಹೋರಾಟ ಮಾಡಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆ, ಇತರೆ ಪೌರ ಸಮಸ್ಯೆ ವಿರುದ್ಧ ಮಹಾಧರಣಿಯನ್ನು ಸಂಘಟಿಸಿತ್ತು ಎಂದರು.
ಸಿಪಿಎಂ ಪ್ರಣಾಳಿಕೆ: ಈ ಬಾರಿಯ ಚುನಾವಣೆಯಲ್ಲಿ ಸಿಪಿಐಎಂ ನಿರ್ಣಾಯಕ ಪಾತ್ರ ವಹಿಸಲು ತಂತ್ರ ರೂಪಿಸಿದ್ದು, ಭ್ರಷ್ಟ ಬಿಜೆಪಿ ಹಾಗೂ ನಿಷ್ಕ್ರೀಯ ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನಪರ, ಹೊರೆರಹಿತ ತೆರಿಗೆ ಪದ್ಧತಿ, ಕೈಗೆಟಕುವ ದರದಲ್ಲಿ ನೀರಿನ ವ್ಯವಸ್ಥೆ, ಪಾರದರ್ಶಕ, ಭ್ರಷ್ಟಾಚಾರ ರಹಿತ, ಸುಂದರ, ಸಮೃದ್ಧ ಸೌಹಾರ್ದ ಮಂಗಳೂರು ಎಂಬ ಚುನಾವಣಾ ಪ್ರಣಾಳಿಕೆಯಲ್ಲಿ ಸ್ಪರ್ಧಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲೂ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಿ ಬೂತ್ ಮಟ್ಟದಲ್ಲಿ ಚುನಾವಣಾ ಸಮಿತಿ ರೂಪಿಸಲಾಗಿದೆ.
ಅಭ್ಯರ್ಥಿಗಳ ವಿವರ: ಇಡ್ಯಾ ಪೂರ್ವ-ಬಿ.ಕೆ.ಇಮ್ತಿಯಾಜ್, ಪಂಜಿಮೊಗರು-ದಯಾನಂದ ಶೆಟ್ಟಿ, ಪದವು ಪಶ್ಚಿಮ-ಮಂಜುಳಾ ಶೆಟ್ಟಿ, ಕದ್ರಿ ಪದವು-ನವೀನ್ ಬಿ, ದೇರೆಬೈಲು ಪಶ್ಚಿಮ-ಸುನಂದಾ ಕೆ, ಬೋಳೂರು-ಪ್ರಭಾವತಿ, ಕದ್ರಿ ಉತ್ತರ-ಪುಷ್ಪಾಅಶೋಕ್ ಗುಂಡಳಿಕೆ, ಪದವು ಪೂರ್ವ-ವಾಸುದೇವ ಜೆ.ಪಿ, ಕೋರ್ಟ್-ಸುನೀಲ್ ಕುಮಾರ್ ಬಜಾಲ್, ಅಳಪೆ ದಕ್ಷಿಣ-ಸುರೇಶ್ ಬಜಾಲ್, ಕಣ್ಣೂರು-ಮಹಮ್ಮದ್ ಸಾದಿಕ್, ಬಜಾಲ್-ಜಯಂತಿ ಶೆಟ್ಟಿ, ಜಪ್ಪಿನಮೊಗರು-ಉದಯಚಂದ್ರ ರೈ, ಹೈಗೆ ಬಜಾರ್-ಭಾರತಿ ಬೋಳಾರ್.