ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಸ್ ಡಿಕ್ಕಿ: ಬೈಕ್ ಸವಾರನಿಗೆ ಗಾಯ (ಸುದ್ದಿ ಸಂಕ್ಷೇಪ)

Mainashree
Updated On : 24 Feb 2013, 11:13 am

ಮೂಲ್ಕಿ: ಮೂರುಕಾವೇರಿ ಬಳಿ ಶುಕ್ರವಾರ ರಾತ್ರಿ ರಾಜ್ಯ ಹೆದ್ದಾರಿಯಲ್ಲಿ ಕಿನ್ನಿಗೋಳಿಯ ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯಿಂದಾಗಿ ಮೋಟಾರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ನಡುಗೋಡು ನಿವಾಸಿ ಪ್ರಕಾಶ್ ತೀವ್ರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಿನಂಗಡಿ ಯುವತಿ ನಾಪತ್ತೆ
ಉಪ್ಪಿನಂಗಡಿ: ಇಲ್ಲಿನ ಸಮೀಪದ ಮೊಗ್ರು ಗ್ರಾಮದ ಪಚ್ಚಡ್ಕ ಮನೆ ನಿವಾಸಿ ಮಂಚ ಮುಗೇರ ಎಂಬವರ ಮಗಳು ವಿನೋದ (18) ಮನೆಯಿಂದ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಬೀಡಿ ಕಟ್ಟುತ್ತಿದ್ದ ವಿನೋದ ಕಟ್ಟಿದ ಬೀಡಿಯನ್ನು ತಾನು ಬ್ರಾಂಚ್‌ಗೆ ಕೊಟ್ಟು ಮರಳಿ ಬಂದಾಗ ಮಗಳು ಮನೆಯಲ್ಲಿರಲಿಲ್ಲ ಎಂದು ಆಕೆಯ ತಂದೆ ಪೊಲಿಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಗುಂಡ್ಮಿ: ಇಂದು ಯಕ್ಷವರ್ಷ
ಹಂಗಾರಕಟ್ಟೆ: ಕಳೆದ ಒಂಬತ್ತು ವರ್ಷಗಳಿಂದ ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ- ಐರೋಡಿ ಇವರು ಆಚರಿಸುತ್ತಾ ಬಂದಿರುವ ಸಂಸ್ಕೃತಿ ಸಂಭ್ರಮದಲ್ಲಿ ಯಕ್ಷವರ್ಷ ತಿಂಗಳ ಸರಣಿ ಕಾರ್ಯಕ್ರಮವು ಭಾನುವಾರ ನಡೆಯಲಿದೆ.ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ 6 ಗಂಟೆಗೆ ವೀರ ವೃಷಸೇನ ಎಂಬ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ. ಕೃಷ್ಣಮೂರ್ತಿ ಉರಾಳರ ನಿರ್ದೇಶನದಲ್ಲಿ ಹಿರಿಯ ಪ್ರಾರ್ಥಮಿಕ ಶಾಲೆ- ಕಾರ್ಕಡದ ಮಕ್ಕಳಿಂದ ಯಕ್ಷಗಾನ ಪ್ರದರ್ಶನ ನಡೆಯುವುದು ಎಂದು ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.
ಲಾರಿ ಡಿಕ್ಕಿ: ಬೈಕ್ ಸವಾರ ಗಂಭೀರ
ಉಪ್ಪಿನಂಗಡಿ: ಇಲ್ಲಿನ ಸಮೀಪದ ನೆಲ್ಯಾಡಿ ಎಂಬಲ್ಲಿ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಬಾಲಕೃಷ್ಣ ಶೆಟ್ಟಿ (35) ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಅನಿಲ ಸಿಲಿಂಡರ್ ತುಂಬಿಸಿ ಕೂಂಡು ಹೋಗುತ್ತಿದ್ದ ಲಾರಿ ಮತ್ತು ಬಾಲಕೃಷ್ಣ ಶೆಟ್ಟಿ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಸಂಭವಿಸಿದಾಗ ಅವರು ಗಂಭೀರವಾಗಿ ಗಾಯಗೊಂಡರು. ಘಟನೆಯಿಂದಾಗಿ ಬೈಕ್ ಸಾವರನ ತಲೆಗೆ ಗಂಭೀರವಾಗಿ ಗಾಯವಾಗಿದ್ದು, ಮಂಗಳೂರು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.
ನೀರಲ್ಲಿ ಮುಳುಗಿ ಮಹಿಳೆ ಸಾವು
ಉಪ್ಪಿನಂಗಡಿ: ಇಲ್ಲಿನ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದ ಪೆರ್ಲ ಬೈಕರ ಸೇಸಪ್ಪ ಗೌಡರ ಪತ್ನಿ ನೀಲಮ್ಮ (60) ಮನೆ ಸಮೀಪದ ಕಪಿಲಾ ನದಿಯ ನೀರಿನ ಸುಳಿಯೊಂದಕ್ಕೆ ಸಿಲುಕಿ ಮೃತ ಪಟ್ಟ ಘಟನೆ ನಡೆದಿದೆ. ಇವರು ಮನೆಯ ಸಮೀಪದ ಮನೆಗೆ ಕೂಲಿ ಕೆಲಸ ಮಾಡಲು ಹೋಗುತ್ತಿದ್ದು, ಮನೆಯಿಂದ ಕೆಲಸ ಮುಗಿಸಿ ಹಿಂತಿರುಗುವಾಗ ದಾರಿ ಮಧ್ಯೆ ಕಪಿಲಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನದಿಯ ಬಟ್ಟಾಜೆ ಸುಳಿ ಎಂಬಲ್ಲಿ ಆಳವಾದ ನೀರಿನ ಸ್ಥಳದಲ್ಲಿ ಇವರ ಶವ ಶುಕ್ರವಾರ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement