ಮಾದಕ ವಸ್ತು ವಿರುದ್ಧ ಹೋರಾಟಕ್ಕೆ ಸಿದ್ಧ...
ವಿಶೇಷ ವರದಿ
ಬಂಟ್ವಾಳ: 'ನಾನು ಮಾದಕ ವಸ್ತುಗಳ ವ್ಯಸನಿಯಾಗಲಾರೆ, ಇತರರನ್ನು ಈ ವ್ಯಸನಗಳಿಂದ ಮುಕ್ತರಾಗಲು ಪ್ರೇರೇಪಿಸುವ ಆದರ್ಶವನ್ನು ನಾನು ರೂಢಿಸಿಕೊಳ್ಳುತ್ತೇನೆ. ನನ್ನ ಆಸುಪಾಸಿನಲ್ಲೂ ಇದರಿಂದಾಗುವ ಹಾನಿಗಳ ಅರಿವು ಮೂಡಿಸಲು ನನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತೇನೆ. ಮಾದಕ ವಸ್ತುಗಳ ಬಳಕೆಯ ವಿರುದ್ಧದ ಹೋರಾಟದಲ್ಲಿ ಭಾಗವಹಿಸಲು ನಾನು ಸದಾ ಸಿದ್ಧನಾಗಿರುತ್ತೇನೆ ಎಂದು ಈ ದೇಶದ ಜವಾಬ್ದಾರಿಯುತ ಮಗುವಾಗಿ, ನಾಗರಿಕನಾಗಿ ಕಾಯಾ-ವಾಚಾ-ಮನಸಾ ಪ್ರತಿಜ್ಞೆ ಮಾಡುತ್ತೇನೆ' ಎಂಬ ಸಾಮೂಹಿಕ ಪ್ರತಿಜ್ಞಾ ವಿಧಿ ಶನಿವಾರ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ಮೊಗಳಗಿತು.
ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಕಲಿಯುತ್ತಿರುವ ಸುಮಾರು 60 ಸಾವಿರ ವಿದ್ಯಾರ್ಥಿಗಳು ಈ ಪ್ರತಿಜ್ಞಾವಿಧಿ ಸ್ವೀಕಾರದಲ್ಲಿ ಪಾಲ್ಗೊಂಡಿದ್ದು ವಿಶೇಷ.
ಬಿ.ಸಿ. ರೋಡಿನಲ್ಲಿರುವ ಬಂಟ್ವಾಳ ತಾಲೂಕು ಕಚೇರಿ ಮುಂಭಾಗದ ಸಾರ್ವಜನಿಕ ರಂಗಮಂದಿರದಲ್ಲಿ ನಡೆದ ಸಮಾರಂಭದಲ್ಲಿ ದ.ಕ. ಜಿಪಂ ಉಪ ಕಾರ್ಯದರ್ಶಿ ಶಿವರಾಮೇಗೌಡರು ಈ ಜಾಗೃತಿ ಪ್ರಮಾಣವಚನ ಬೋಧಿಸುತ್ತಿದ್ದರೆ ರಂಗಮಂದಿರದ ಮುಂದೆ ಸರತಿ ಸಾಲಿನಲ್ಲಿ ಜಮಾಯಿಸಿದ್ದ 1200ಕ್ಕೂ ಅಧಿಕ ವಿದ್ಯಾರ್ಥಿಗಳು ಬಲಗೈ ಮುಂದೆ ಚಾಚಿ ಪ್ರಮಾಣವಚನ ಪುನರುಚ್ಚರಿಸಿದರು. ಶನಿವಾರ ಮಧ್ಯಾಹ್ನ 11 ಗಂಟೆಯಿಂದ 11.20ರ ಅವಧಿಯಲ್ಲಿ ಬಂಟ್ವಾಳ ತಾಲೂಕಿನಲ್ಲಿರುವ ಎಲ್ಲ ಶಾಲೆಗಳಲ್ಲಿಯೂ ಏಕ ಕಾಲದಲ್ಲಿ ನಡೆದ ಪ್ರತಿಜ್ಞಾ ವಿಧಿ ಸ್ವೀಕಾರದಲ್ಲಿ ಎಲ್ಲ ಶಾಲೆಗಳ ಶಿಕ್ಷಕರು- ವಿದ್ಯಾರ್ಥಿಗಳು ಬದ್ಧತಾ ಪ್ರಮಾಣವಚನ ಸ್ವೀಕರಿಸುವ ಮೂಲಕ ದುಶ್ಚಟಗಳ ವಿರುದ್ಧ ವೈಯುಕ್ತಿಕ ಸಮರವನ್ನೇ ಸಾರಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಚೈತನ್ಯ ಫೌಂಡೇಶನ್ ಸಹಕಾರದೊಂದಿಗೆ ಜೆಸಿಐ ಬಂಟ್ವಾಳದ ಪ್ರಾಯೋಜಕತ್ವದಲ್ಲಿ ತಾಲೂಕಿನಾದ್ಯಂತ ನಡೆದ ದುಶ್ಚಟಗಳ ವಿರುದ್ಧದ ಜಾಗೃತಿ ಸಪ್ತಾಹ ಪ್ರಹರಿ-2013 ಹೀಗೆ ವಿದ್ಯಾರ್ಥಿಗಳ ಅರ್ಥಪೂರ್ಣ ಪ್ರತಿಜ್ಞಾವಿಧಿಯೊಂದಿಗೆ ಸಮಾಪನಗೊಂಡಿತು.
ಬಂಟ್ವಾಳ ತಾಲೂಕು ತಹಸೀಲ್ದಾರ್ ಮಲ್ಲೇಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಸ್ಮಾನ್, ಶಿಕ್ಷಕ ಸಂಘಟನೆಗಳ ಪ್ರಮುಖರಾದ ತಾರೇಶ್ ನಾಯ್ಕ್, ಫ್ರಾನ್ಸಿಸ್ ಡೇಸಾ, ವಕೀಲರ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಚೈತನ್ಯ ಫೌಂಡೇಶನ್ ಅಧ್ಯಕ್ಷ ನೈಝಿಲ್ ನೊರೊನ್ಹಾ, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು, ಜೇಸಿ ಸಂಸ್ಥೆಯ ಪ್ರಮುಖರಾಧ ಸುರೇಶ್ ನಾವೂರು, ಲತನ್ ಕುಮಾರ್, ಲೋಕೇಶ್ ಸುವರ್ಣ, ಯತೀಶ್ ಕರ್ಕೇರಾ, ಸದಾನಂದ, ಕಿಶೋರ್, ಡಾ. ಬಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್, ಸಮನ್ವಯಾಧಿಕಾರಿ ಕಮಲಾಕ್ಷ ಕಲ್ಲಡ್ಕ, ರಮಾನಂದ, ಸುಜಾತ ಕುಮಾರಿ, ಶ್ರೀಕಾಂತ್, ವಿಠಲ ನಾಯ್ಕ ಮೊದಲಾದವರು ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾಕರ್ ಸ್ವಾಗತಿಸಿದರು. ಶಿಕ್ಷಕ ರಾಮಚಂದ್ರ ರಾವ್ ನಿರೂಪಿಸಿದರು.