ಸಾಹಿತ್ಯ ಸಮ್ಮೇಳನವೆಂದರೆ ಅಕ್ಷರ ಜಾತ್ರೆ: ತುಳಪುಳೆ
ಬೆಳ್ತಂಗಡಿ: ಸಾಹಿತ್ಯ ಸಮ್ಮೇಳನವೆಂದರೆ ಅಕ್ಷರ ಜಾತ್ರೆ. ಇದು ಜನಮಾನಸವನ್ನು ಬಡಿದೆಬ್ಬಿಸಿ ಅಕ್ಷರ ಲೋಕದಲ್ಲಿ ವಿಹರಿಸುವಂತೆ ಮಾಡುವ ಅಪೂರ್ವ ಕ್ಷಣವಾಗಿದೆ ಎಂದು ಡಾ.ಟಿ.ಎನ್. ತುಳಪುಳೆ ಹೇಳಿದರು. ಅವರು ಶನಿವಾರ ವೇಣೂರಿನ ಬಾಹುಬಲಿ ಸಭಾಭವನದಲ್ಲಿ ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ತಾಲೂಕು ಮಟ್ಟದ 12 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ಸಿಕ್ಕಿದೆಯಾದರೂ ಕರ್ನಾಟಕ ಸರ್ಕಾರ ಭಾಷೆಗೆ ದೊರಕಬೇಕಾದ ಸೌಲಭ್ಯಗಳು ದೊರಕುವಂತೆ ಮುತುವರ್ಜಿಯಿಂದ ಪ್ರಯತ್ನಿಸಬೇಕಾಗಿದೆ. ಇಂದಿನ ಯುವ ಜನತೆ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಭಾಷೆಯ ಬಗ್ಗೆ ಹೆಚ್ಚು ಒಲವು ತೋರಿಸುತ್ತಿಲ್ಲ. ಕನ್ನಡ ಪುಸ್ತಕಗಳನ್ನು ಕೊಂಡು ಓದಿ ಕನ್ನಡವನ್ನೇ ಆದಷ್ಟು ಬಳಸಿದಾಗ ಕನ್ನಡ ಖಂಡಿತ ಉಳಿಯುತ್ತದೆ. ಈ ಕೆಲಸ ತುರ್ತು ಆಗಬೇಕಾಗಿದೆ ಎಂದರು.
ಮಿನಿ ಸಾಹಿತ್ಯಕ್ಕೆ ಕುಂಭಮೇಳ: ಸಮಗ್ರ ಜೀವನಕ್ಕೆ ಚೈತನ್ಯ ತುಂಬುವ ಸಂಜೀವಿನಿ ಇದರಲ್ಲಿದೆ. ಪರಾಮರ್ಶಗೆ ಬೇಕಾದ ಗಟ್ಟಿನೆಲಯಿದೆ. ಪರಾಮರ್ಶನೆಗೆ ಬೇಕಾದ ನೆಲೆ ಇದರಲ್ಲಿದೆ. ಜ್ಞಾನ ಸತ್ರವಿದು. ಹಾಗಾಗಿ ಇದೊಂದು ಮಿನಿ ಸಾಹಿತ್ಯಕ ಕುಂಭಮೇಳ ಇದ್ದ ಹಾಗೆ ಎಂದರು.
ಪ್ರೊ.ಎಸ್. ಪ್ರಭಾಕರ್ ಮಾತನಾಡಿ, ಕನ್ನಡದಲ್ಲಿ ಇಂಗ್ಲಿಷ್ ಭಾಷೆ ಬೆರಕೆಯಾಗಿ ಈಗೀಗ ಹಳ್ಳಿಯವರೂ ಕನ್ನಡದೊಂದಿಗೆ ಇಂಗ್ಲಿಷ್ ಪದಗಳನ್ನು ಸೇರಿಸುತ್ತಿದ್ದಾರೆ. 5ನೇ ತರಗತಿಯವರೆಗೆ ಎಲ್ಲಾ ಮಕ್ಕಳು ಕನ್ನಡ ಮಾಧ್ಯಮದಲ್ಲೇ ಕಲಿಯುವಂತಾಗಬೇಕು. ಕನ್ನಡ ಉಳಿಸುವ ಆಲೋಚನೆ ಇದೆಯೆಂತಾದರೆ ಅದನ್ನು ಹೃದಯದಲ್ಲಿರಿಸಿಕೊಂಡು ಕೃತಿಯಲ್ಲಿಳಿಸಬೇಕು ಎಂದರು.
ಕೃತಿ ಬಿಡುಗಡೆ: ಕಸಾಪ ದ.ಕ. ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಆಶಯ ಭಾಷಣ ಮಾಡಿ, ಸಮ್ಮೇಳನ ಸಂಚಿಕೆ ಚಾರುಮುಡಿ ಹಾಗೂ ಸಮ್ಮೇಳನಾಧ್ಯಕ್ಷರ ಬೆಳಕು ಕೃತಿಯನ್ನು ಬಿಡುಗಡೆಗೊಳಿಸಿದರು. ವಿಷ್ಣು ಭಟ್ ಡೋಂಗ್ರೆ, ದೇಜಪ್ಪ ಶೆಟ್ಟಿ ಪಿ., ಸಿ.ಕೆ. ಚಂದ್ರಕಲಾ, ಬಿ. ಐತಪ್ಪ ನಾಯ್ಕ, ಡಾ.ಎಂ.ಪಿ. ಶ್ರೀನಾಥ್, ಕಾಮಕೃಷ್ಣ ಭಟ್ ಬೆಳಾಲು,ಅಶ್ರಫ್ ಆಲಿಕುಂಞ ಇದ್ದರು. ಕೆ. ಶಿವರಾಮ ಹೆಗ್ಡೆ ಸ್ವಾಗತಿಸಿದರು. ಡಾ.ಬಿ. ಯಶೋವರ್ಮ ಪ್ರಸ್ತಾವಿಸಿದರು. ಎಲ್.ಜೆ. ಫೆರ್ನಾಂಡಿಸ್ ವಂದಿಸಿದರು. ಶಿವಶಂಕರ ಭಟ್ ಅಂಡಿಂಜೆ ನಿರೂಪಿಸಿದರು.