ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಸುದ್ದಿ ಸಂಕ್ಷೇಪ

Mainashree
Updated On : 24 Feb 2013, 11:14 am

ನಾಮಪತ್ರ: ನಿಯಮ ಉಲ್ಲಂಘಿಸಿದರೆ ಕ್ರಮ
ಮಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಯುಕ್ತ ಪಾಲಿಕೆ ಮತ್ತು ನಾಮಪತ್ರ ಸಲ್ಲಿಸುವ ಇತರೆಡೆ ಸದಾಚಾರ ಸಂಹಿತೆ ಜಾರಿಯಲ್ಲಿದ್ದು, ನಾಮಪತ್ರ ಸಲ್ಲಿಕೆ ವೇಳೆ ಅನುಮತಿ ಪಡೆಯದೆ ಮೆರವಣಿಗೆ, ಸಭಾ ಕಾರ್ಯಕ್ರಮ ನಡೆಸಬಾರದು. ನಿಯಮ ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹೇಳಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣಾ ನಾಮಪತ್ರ ಸಲ್ಲಿಸುವ ವೇಳೆ ನೂರು ಮೀಟರ್ ಸುತ್ತಮುತ್ತ ವೀಡಿಯೋಗ್ರಫಿ ಮಾಡಲಾಗುತ್ತದೆ. ಚುನಾವಣಾ ಅಕಾಂಕ್ಷಿಗಳು ಕಾನೂನು ಪಾಲನೆ ಮಾಡಬೇಕೆಂದು ಸೆಕ್ಟರ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇಂದು ರಥಬೀದಿಯಲ್ಲಿ 'ಭಕ್ತಿ ರಥ'
ಮಂಗಳೂರು: ಮಂಗಳೂರಿನ ಭಾರತೀ ಸಂಗೀತ ಪ್ರತಿಷ್ಠಾನದಿಂದ ಫೆ.24ರಂದು ರಥಬೀದಿಯ ಶ್ರೀವೆಂಕಟ್ರಮಣ ದೇವಸ್ಥಾನದ ರಾಜಾಂಗಣದಲ್ಲಿ 'ಭಕ್ತಿ ರಥ' ಸಂತವಾಣಿ ಕಾರ್ಯಕ್ರಮ ನಡೆಯಲಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನ ಉಪಾಧ್ಯಕ್ಷ ಪ್ರೊ.ನರೇಂದ್ರ ನಾಯಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪುಣೆಯ ಪ್ರಸಿದ್ಧ ಗಾಯಕಿ ರೇವತಿ ಕಾಮತ್‌ರಿಂದ ಸಂತವಾಣಿ ನಡೆಯಲಿದ್ದು, ಪುಣೆಯ ಭರತ್ ಕಾಮತ್ ತಬ್ಲಾ, ನರೇಂದ್ರ ನಾಯಕ್ ಹಾರ್ಮೋನಿಯಂ, ಪೂನಾದ ಪ್ರಸಾದ್ ಜೋಶಿ ಪಖವಾಜ್ ಹಾಗೂ ಪೂನಾದ ಪರಾಗ್ ಜೋಶಿ ತಾಳದಲ್ಲಿ ಸಾಥ್ ನೀಡುವರು.ಎಕ್ಸ್‌ಪರ್ಟ್ ಕಾಲೇಜಿನಿಂದ ಹಿಂದೂಸ್ತಾನಿಯಲ್ಲಿ ತಂಬೂರಿ(ತಾನ್ಫುರ)ಕಲಿಕೆಗೆ ವಿಶೇಷ ಒತ್ತು ನೀಡಲಿದ್ದು, ಪ್ರತಿ ಬ್ಯಾಚ್‌ನ ಐವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದೆ. ಅಕಾಡೆಮಿ ಆಶ್ರಯದಲ್ಲೂ ತಾನ್ಫುರ ಕಲಿಕೆಗೆ ಅವಕಾಶವಿದೆ ಎಂದು ಹೇಳಿದರು.
ಉಳ್ಳಾಲ: ಚುನಾವಣೆ ಬಹಿಷ್ಕಾರ ಎಚ್ಚರಿಕೆ
ಮಂಗಳೂರು: ಉಳ್ಳಾಲ ಪುರಸಭಾ ವ್ಯಾಪ್ತಿಯ ಅಳೇಕಲ ವಾರ್ಡ್ 9 ಪೂಜಾರಬೈಲು ಹಾಗೂ ಹಳೆಕೋಟೆ ವಾರ್ಡ್ 10ನಲ್ಲಿ ಕೊಳಚೆ ನೀರಿನ ಚರಂಡಿ ಕಳಪೆ ಕಾಮಗಾರಿ ಹಿನ್ನಲೆಯಲ್ಲಿ ಮಾ.7ರಂದು ನಡೆಯುವ ಪುರಸಭಾ ಚುನಾವಣೆ ಬಹಿಷ್ಕರಿಸುವುದಾಗಿ ನಾಗರಿಕರು ಹೇಳಿದ್ದಾರೆ.  2 ವರ್ಷಗಳಿಂದ ಈ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ದೂರಿದರೂ ಪ್ರಯೋಜನವಾಗಿಲ್ಲ. ಚರಂಡಿ ಕಾಮಗಾರಿ ಕಳಪೆಯಾಗಿದ್ದಲ್ಲದೆ, ಎತ್ತರ ಸ್ಥಳದಲ್ಲಿ ಮಣ್ಣು ಹಾಕಿದ್ದರಿಂದ ಕೊಳಚೆ ನೀರು ಸರಾಗ ಹರಿಯಲು ಅಸಾಧ್ಯವಾಗಿದೆ. ಈ ಮೊದಲು ನೀಡಿದ ಭರವಸೆ ಈಡೇರದ ಕಾರಣ ಚುನಾವಣೆ ವೇಳೆ ಭರವಸೆ ನೀಡಿದರೂ ನಂಬುವುದಿಲ್ಲ. ಆದ್ದರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾಗಿ ನಾಗರಿಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಧು-ವರರ ಸಮಾವೇಶ
ಮಂಗಳೂರು: ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ವತಿಯಿಂದ ಫೆ. 24 ರಂದು ಅಪರಾಹ್ನ 12ಕ್ಕೆ ಲೇಡಿಹಿಲ್‌ನ ಒಕ್ಕಲಿಗರ ಸಭಾಭವನದಲ್ಲಿ ವಧು-ವರರ ಮುಖಾಮುಖಿ ಸಮಾವೇಶ ನಡೆಯಲಿದೆ. ಆಸಕ್ತರು ತಮ್ಮ ಹೆತ್ತವರೊಂದಿಗೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಳ್ಳಬಹುದು. ನೋಂದಾಯಿಸಿಕೊಂಡಿರುವ ವಧುವರರು ಭಾಗವಹಿಸಿ ತಮ್ಮ ಬಾಳ ಸಂಗಾತಿಯನ್ನು ಗುರುತಿಸಿಕೊಳ್ಳುವ ಅವಕಾಶವನ್ನು ಬಳಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಕಚೇರಿಯ 0824-2452844 ಸಂಪರ್ಕಿಸಬಹುದು ಎಂದು ಸಂಘದ ಅಧ್ಯಕ್ಷ ಎಸ್.ಎನ್. ನಾರಾಯಣ ಗೌಡ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ದೇವಸ್ಯ ಪದ್ಮನಾಭ, ನಿರ್ದೇಶಕ ದಿನಕರ ಕೆ.ಬಿ, ಎಂ. ಮೋನಪ್ಪ ಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement