ಚುನಾವಣೆ ಸಂದರ್ಭ ಸಾರಾಯಿ ರವಾನೆ ವಿರುದ್ಧ ಕ್ರಮಕ್ಕೆ ಆಗ್ರಹ
ಮಂಗಳೂರು: ಚುನಾವಣೆ ಸಂದರ್ಭ ದಲಿತ ಕಾಲೋನಿಗಳಿಗೆ ಹೆಂಡ ಸಾರಾಯಿಗಳ ಆಮಿಷ ತೋರಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ಪಿ. ಕೇಶವ ಹೇಳಿದ್ದಾರೆ.
ಭಾನುವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಭೆಯಲ್ಲಿ ತಿಳಿಸಿದರು.
ಪ್ರತಿಕ್ರಿಯಿಸಿದ ಡಿಸಿಪಿ ಧರ್ಮಯ್ಯ, ಇಂಥ ಪ್ರಕರಣಗಳು ಕಂಡು ಬಂದಲ್ಲಿ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ದಲಿತ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಪರಾರಿಯಾಗಿರುವ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದರೂ, ಆತನನ್ನು ಇನ್ನೂ ಬಂಧಿಸಿಲ್ಲವೇಕೆ ಎಂದು ಕೇಶವ ಪ್ರಶ್ನಿಸಿದರು.
ಆತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅದನ್ನು ನಿರಾಕರಿಸಿದೆ. ಆರೋಪಿ ಮುಂಬೈಗೆ ಹೋಗಿ ತಲೆಮರೆಸಿಕೊಂಡಿದ್ದು, ಈಗಾಗಲೇ ತನಿಖೆ ನಡೆಸಲು ಪೊಲೀಸರನ್ನು ಕಳುಹಿಸಲಾಗಿದೆ ಎಂದು ಹೇಳಿದರು.
ದಲಿತ ಮುಖಂಡ ಆನಂದ್, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯೊಬ್ಬರು ದಲಿತನ ಮೇಲೆ ಹಲ್ಲೆ ನಡೆಸಿದ್ದು, ಮೂರು ತಿಂಗಳು ಕಳೆದರೂ ಪೇದೆ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಪೊಲೀಸ್ ಪೇದೆ ಇಲ್ಲಿಯವರೆಗೆ ಕೆಲಸಕ್ಕೆ ಹಾಜರಾಗದೇ ಇದ್ದು, ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್ ಹೇಳಿದರು.
ಕಾವೂರು ವ್ಯಾಪ್ತಿಯಲ್ಲಿ ಬಜರಂಗದಳದ ಹೆಸರಿನಲ್ಲಿ ಸ್ಥಳೀಯರಲ್ಲಿ ಪುಂಡು ರೌಡಿತನ ತೋರಿಸುತ್ತಿರುವ ಮಹೇಶ್ ಎಂಬವನ ಮೇಲೆ ಅನೇಕ ಕೇಸು ದಾಖಲಾಗಿದ್ದರೂ, ಪೊಲೀಸರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದರು.
ಈತ ತಲೆಮರೆಸಿದ್ದು, ಕೇಸು ದಾಖಲಾಗಿದೆ, ಕೂಡಲೇ ಕ್ರಮ ಕೈಗೊಳ್ಳಲಾಗುವುದು ಕಾವೂರು ಠಾಣೆ ಎಸ್ಐ ತಿಳಿಸಿದರು.