ಪೊಲೀಸ್ ಸರ್ಕಲ್
ರಸ್ತೆ ಬದಿ ನಿಂತಿದ್ದ ಮಕ್ಕಳಿಗೆ ಕಾರು ಡಿಕ್ಕಿ: ಬಾಲಕಿ ಸಾವು
ಪಡುಬಿದ್ರಿ: ಇಲ್ಲಿನ ರಾ.ಹೆದ್ದಾರಿ 66ರ ತೆಂಕಎರ್ಮಾಳು ಗ್ರಾಮದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟು, ಓರ್ವ ಬಾಲಕ ಗಂಭೀರ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ನಿವಾಸಿ ಸಂಜರಿ ಖಾತೂನ್ ಅವರ ಮಕ್ಕಳಾದ ಸಾದಿಯಾ ಸದಫ್ ಮೃತಪಟ್ಟಿದ್ದು, ಸಾಯಿಮಾ ಪರ್ವಿನ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಸಮಾರಂಭಕ್ಕೆ ಹೋಗಲು ಎರ್ಮಾಳು ತೆಂಕ ಗ್ರಾಮದ ಬೋರ್ಡ್ ಶಾಲೆ ಬಳಿ ರಾ.ಹೆದ್ದಾರಿಯ ಪಶ್ಚಿಮ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಆಗ ಉಡುಪಿ ಕಡೆಯಿಂದ ಅತಿ ವೇಗದಲ್ಲಿ ಬಂದ ಮಾರುತಿ ಆಲ್ಟೋ ಕಾರು ಮಕ್ಕಳಾದ ಸಾದಿಯಾ ಸದಫ್ ಹಾಗೂ ಸಾಯಿಮಾ ಪರ್ವಿನ್ ಅವರಿಗೆ ಡಿಕ್ಕಿ ಹೊಡೆಯಿತು. ಇದರಿಂದ ಮಕ್ಕಳಿಬ್ಬರು ತೀವ್ರವಾಗಿ ಗಾಯಗೊಂಡರು. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಕೆರೆದುಕೊಂಡು ಹೋಗಲಾಯಿತು. ಆದರೆ ಅವರಲ್ಲಿ ಸಾದಿಯಾ ಸದಫ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಅವರ ತಂದೆ ಮಹಮ್ಮದ್ ಶೌಕತ್ ಆಲಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಡಕೆ ಕಳವು: ದೂರು
ಶಂಕರನಾರಾಯಣ: ಇಲ್ಲಿನ ಕುಳುಂಜೆ ಗ್ರಾಮದ ಲಕ್ಕೊಳಿ ಎಂಬಲ್ಲಿ ಸಾವಿರಾರು ರು. ಮೌಲ್ಯದ ಅಡಕೆ ಕಳವು ಮಾಡಿದ ಘಟನೆ ಫೆ.22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೃಷಿಕ ಗಣೇಶ್ ಕೆದ್ಲಾಯ ಅವರು ತಮ್ಮ ತೋಟದಲ್ಲಿ ಬೆಳೆದ ಅಡಕೆಯನ್ನು ಒಣಗಿಸಿ 35 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿ, ಚೀಲದ ಮೇಲೆ ಜಿ. ಕೆದ್ಲಾಯ ಎಂದು ಬರೆದು, ಮನೆಯ ಅಂಗಳದಲ್ಲಿ ಚಪ್ಪರದ ಕೆಳಗೆ ಸಂಗ್ರಹಿಸಿಟ್ಟಿದ್ದರು. ಈ ಅಡಕೆಯನ್ನು ಫೆ.22ರಂದು ರಾತ್ರಿ ಕಳ್ಳರು ಕಳವು ಮಾಡಿದ್ದಾರೆ. ಕಳವಾದ ಅಡಕೆಯ ತೂಕ ಸುಮಾರು 5 ಕ್ವಿಂಟಾಲ್ ಆಗಬಹುದು ಹಾಗೂ ಅದರ ಬೆಲೆ ರು. 35 ಸಾವಿರ ಆಗಬಹುದು ಎಂದು ಕೆದ್ಲಾಯ ಅವರು ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಕ್ಷಾ ಡಿಕ್ಕಿ: ವೃದ್ಧ ಸನ್ಯಾಸಿ ಸಾವು
ಮಂಗಳೂರು: ಲೇಡಿಗೋಷನ್ ಆಸ್ಪತ್ರೆ ಬಳಿ ನಿಂತಿದ್ದ ಬೆಂಗಳೂರು ಮೂಲದ ಸನ್ಯಾಸಿ ಶ್ರೀರಾಮುಲು ಯಾನೆ ಶಿವರಾಂ ಕೃಷ್ಣ (70) ಎಂಬವರಿಗೆ ರಿಕ್ಷಾ ಡಿಕ್ಕಿಯಾಗಿ ಸಾವಿಗೀಡಾದ ಘಟನೆ ಭಾನುವಾರ ಸಂಭವಿಸಿದೆ. ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದ ರಿಕ್ಷಾ ಪರಾರಿಯಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಿತಾದರೂ ಪ್ರಯೋಜನವಾಗದೆ ಮೃತಪಟ್ಟರು ಎಂದು ಸಂಚಾರಿ ಪಶ್ಚಿಮ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸನ್ಯಾಸಿಯಾಗಿದ್ದರು: ಮೃತ ಶ್ರೀರಾಮುಲು ಮೂಲತಃ ಬೆಂಗಳೂರಿನವರು. 20 ವರ್ಷಗಳ ಹಿಂದೆ ಪುತ್ರ ಮೃತಪಟ್ಟ ಹಿನ್ನೆಲೆಯಲ್ಲಿ ಬೇಸರದಿಂದ ಮನೆ ಬಿಟ್ಟು ಹೋಗಿ ಹೃಷಿಕೇಶದಲ್ಲಿ ಸನ್ಯಾಸ ಸ್ವೀಕರಿಸಿದ್ದರು. ಆಗಾಗ ಮನೆಗೂ ಬರುತ್ತಿದ್ದರು. ಇತ್ತೀಚೆಗೆ ಮಂಗಳೂರಿಗೂ ಬಂದಿದ್ದರು. ಮಂಗಳೂರಿನಿಂದ ಮುಂಬೈಗೆ ಹೋಗಿ ಅಲ್ಲಿಂದ ಹೃಷಿಕೇಶಕ್ಕೆ ಹೋಗಲು ರೈಲು ಟಿಕೆಟ್ ಬುಕ್ ಮಾಡಿದ್ದರು. ಈ ನಡುವೆ ದುರಂತ ಸಂಭವಿಸಿದೆ. ಅಪಘಾತ ಬಳಿಕ ಅವರ ಚೀಲದಲ್ಲಿ ದೊರೆತ ಮೊಬೈಲ್‌ನಿಂದ ಪೊಲೀಸರು ಮನೆಗೆ ಕರೆ ಮಾಡಿದಾಗ ವೃದ್ಧನ ಗುರುತು ಪತ್ತೆಯಾಗಿದೆ.
ಮಾದಕ ದ್ರವ್ಯ ಮಾರಾಟ: ಇಬ್ಬರ ಸೆರೆ
ಮಣಿಪಾಲ: ಮಣಿಪಾಲದ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಪೂರೈಕೆ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸುವಲ್ಲಿ ಮಣಿಪಾಲ ಠಾಣೆ ಪೊಲೀಸರು ಮತ್ತೆ ಯಶಸ್ವಿಯಾಗಿದ್ದಾರೆ. ಇದೇ ಪೊಲೀಸರು ಎರಡು ದಿನಗಳ ಹಿಂದೆ 3 ಮಂದಿಯನ್ನು ಬಂಧಿಸಿ ಸಾವಿರಾರು ರು. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದರು. ಮಣಿಪಾಲ ಠಾಣೆಯ ಇನ್ಸ್ಪೆಕ್ಟರ್ ಸದಾನಂದ ಎ.ತಿಪ್ಪಣ್ಣನವರ್ ಮತ್ತು ಸಿಬ್ಬಂದಿ, ಇಲ್ಲಿನ ಪೆರಂಪಳ್ಳಿ ಚರ್ಚ್ ಬಳಿ ಸ್ಮಶಾನದ ಹತ್ತಿರ ಬೆಳಗ್ಗೆ 8.30 ಗಂಟೆಗೆ ದಾಳಿ ನಡೆಸಿ, ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಿವಾಸಿಗಳಾದ ವಿನಾಯಕ (43), ನಫೀಸಾ ಅಲಿಯಾಸ್ ಫರಿಧಾ (40) ಎಂಬವರನ್ನು ಬಂಧಿಸಿ, ಅವರ ವಶದಲ್ಲಿದ್ದ ಸುಮಾರು ರು. 25 ಸಾವಿರ ಮೌಲ್ಯದ 1.150 ಗ್ರಾಂ ಗಾಂಜಾ, ಮತ್ತು ರು. 7,800 ನಗದು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆವರು ಈ ದಂಧೆಗೆ ಬಳಸಿಕೊಂಡಿದ್ದ ಮಾರುತಿ ಓಮ್ನಿ ಕಾರು, 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಬೈಕ್ ಸವಾರ ಸಾವು
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಶನಿವಾರ ತಡರಾತ್ರಿ ಬೈಕ್‌ಗಳೆರಡು ಪರಸ್ಪರ ಡಿಕ್ಕಿಯಾಗಿ ಧರ್ಮಸ್ಥಳ ನಿವಾಸಿ ಅರುಣ್ ಕುಮಾರ್ (45) ಮೃತಪಟ್ಟಿದ್ದಾರೆ. ವಿರೂಪಾಕ್ಷ ಎಂಬವರು ಚಲಾಯಿಸುತ್ತಿದ್ದ ಬೈಕ್ ಮತ್ತು ಅರುಣ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ನಡುವೆ ಪರಸ್ಪರ ಡಿಕ್ಕಿಯಾಗಿದೆ. ಗಂಭೀರ ಗಾಯಗೊಂಡ ಅರುಣ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಈ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೆಂಗಿನ ಮರ ಬಿದ್ದು ಬಾಲಕ ಸಾವು
ಮಂಗಳೂರು: ಕರಿಮೆಣಸು ಕೊಯ್ಯಲೆಂದು ತಂದೆ ಮರವೇರಿದಾಗ, ಮರ ಮುರಿದುಬಿದ್ದು ಮಗು ಮೃತಪಟ್ಟ ದಾರುಣ ಘಟನೆ ಭಾನುವಾರ ಕೈರಂಗಳ ಎಂಬಲ್ಲಿ ಸಂಭವಿಸಿದೆ. ಮೃತಪಟ್ಟ ಬಾಲಕ ವಿಷ್ಣು ಪ್ರಸಾದ್(6). ಬೆಳಗ್ಗೆ ತಂದೆಯ ಜತೆ ತೆಂಗಿನ ತೋಟಕ್ಕೆ ಬಂದಿದ್ದ. ಹಳೆ ತೆಂಗಿನ ಮರಕ್ಕೆ ಹಬ್ಬಿದ ಬಳ್ಳಿಯಿಂದ ಕರಿಮೆಣಸು ಕೀಳಲು ತಂದೆ ಆನಂದ ಮೂಲ್ಯ ಮರವೇರಿದ್ದ. ಅದೇ ವೇಳೆ ಮರ ಮುರಿದು ಕೆಳಗೆ ನಿಂತಿದ್ದ ವಿಷ್ಣು ಪ್ರಸಾದನ ಮೇಲೆ ಬಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡ ಕೃಷ್ಣಪ್ರಸಾದನನ್ನು ಆಸ್ಪತ್ರೆಗೆ ಸೇರಿಸಿದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಎಂದು ಕೊಣಾಜೆ ಪೊಲೀಸರಿಗೆ ದೂರು ನೀಡಲಾಗಿದೆ.
ಬಸ್ ಡಿಕ್ಕಿ: ಬೈಕ್ ಸಹಸವಾರ ಸಾವು
ಉಡುಪಿ: ಬೈಕ್‌ಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸಹಸವಾರ ಮೃತಪಟ್ಟ ಘಟನೆ ಉಡುಪಿಯ ಎಸ್.ಕೆ.ಎಂ. ಕ್ರಾಸ್ ಜಂಕ್ಷನ್ ಬಳಿ ನಡೆದಿದೆ. ದಿನೇಶ್ ಮೃತರು. ಶಿವರಾಮ ಪೂಜಾರಿ ಎಂಬವರು ಶನಿವಾರ ತಮ್ಮ ಭಾವ ದಿನೇಶ್ ಅವರನ್ನು ಬೈಕ್‌ನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಮಣಿಪಾಲದಿಂದ ಮನೆಗೆ ಬರುವ ಸಂದರ್ಭದಲ್ಲಿ ಎಸ್.ಕೆ.ಎಂ. ಕ್ರಾಸ್ ಜಂಕ್ಷನ್ ಬಳಿ ಕೊಹಿನೂರ್ ಬಸ್‌ನ ಚಾಲಕನು ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಬೈಕ್ ಸವಾರ ಶಿವರಾಮ ಪೂಜಾರಿ ಅವರ ಅಣ್ಣ ದಿನೇಶ್ ಎಂಬವರಿಗೆ ತಲೆಯ ಹಿಂಭಾಗಕ್ಕೆ ತೀವ್ರ ಏಟು ಆಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಭಾನುವಾರ ನಸುಕಿನ ಜಾವ ದಿನೇಶ್ ಮೃತಪಟ್ಟಿದ್ದಾರೆ. ಈ ಬಗ್ಗೆ ಶಿವರಾಮ ಪೂಜಾರಿ ಅವರು ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರು ಡಿಕ್ಕಿ: ಬಾಲಕಿ ಸಾವು
ಪಡುಬಿದ್ರಿ: ಕಾರು ಡಿಕ್ಕಿ ಹೊಡೆದು ಬಾಲಕಿಯೋರ್ವಳು ಮೃತಪಟ್ಟಿದ್ದು, ಇನ್ನೋರ್ವ ಬಾಲಕಿ ಗಾಯಗೊಂಡ ಘಟನೆ ಭಾನುವಾರ ಮಧ್ಯಾಹ್ನ ಎರ್ಮಾಳು ತೆಂಕ ಗ್ರಾಮದ ಬೋರ್ಡ್ ಶಾಲೆಯ ಬಳಿ ನಡೆದಿದೆ. ಮಹಮ್ಮದ್ ಶೌಕತ್ ಆಲಿ ಅವರ ಪುತ್ರಿ ಸಾದಿಯಾ ಸದಫ್ ಮೃತರು. ಸಾದಿಯಾ ಹಾಗೂ ಸಾಯಿಮಾ ಪರ್ವಿನ್ ತಮ್ಮ ತಾಯಿಯೊಂದಿಗೆ ಉಚ್ಚಿಲದಲ್ಲಿ ನಡೆಯುವ ಸಮಾರಂಭಕ್ಕೆ ಹೋಗಲು ರಾಷ್ಟ್ರೀಯ ಹೆದ್ದಾರಿ- 66 ರಸ್ತೆಯ ಬದಿಯಲ್ಲಿ ಬಸ್ಸಿಗಾಗಿ ಕಾಯುತ್ತಿರುವ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಇಬ್ಬರೂ ಗಂಭೀರ ಗಾಯಗೊಂಡಿದ್ದು ಅವರನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ದಾಖಲಿಸಲಾಯಿತು. ಸಾದಿಯಾ ಸದಫ್ ಮೃತಪಟ್ಟಿದ್ದು, ಸಾಯಿಮಾ ಪರ್ವಿನ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗ ದಾಖಲಾಗಿದೆ. ಮೃತರ ತಂದೆ ಮಹಮ್ಮದ್ ಶೌಕತ್ ಆಲಿ ನೀಡಿದ ದೂರಿನಂತೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.