ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಬಂಟ್ವಾಳ ಪೊಲೀಸ್ ಉಪವಿಭಾಗ: ಕಟ್ಟಡ, ಸಿಬ್ಬಂದಿ ನೇಮಕ ಇಲ್ಲ

Mainashree
Updated On : 25 Feb 2013, 10:57 am

ವಜ್ರಾಕ್ಷಿ ಬಂಟ್ವಾಳ
ಮಂಗಳೂರು: ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕನ್ನು ಉಪವಿಭಾಗದಲ್ಲಿ ಸೇರಿಸಿಕೊಳ್ಳಲು ಅನುಮತಿ ಸಿಕ್ಕಿದೆ.
ಇದು ಬಂಟ್ವಾಳ ತಾಲೂಕಿಗೆ ಶುಭ ಸುದ್ದಿಯಾದರೂ, ಸಿಬ್ಬಂದಿ ಕೊರತೆ ಅನುಭವಿಸುತ್ತಿರುವ ಬಂಟ್ವಾಳ ಠಾಣೆಗಳು ಇದರಿಂದ ಮುಕ್ತಿ ಪಡೆಯಬಹುದೇ ಎಂಬ ಪ್ರಶ್ನೆಗೆ ಖಚಿತ ಉತ್ತರ ಸಿಕ್ಕಿಲ್ಲ.
ಬಂಟ್ವಾಳ ಮತ್ತು ಬೆಳ್ತಂಗಡಿಯ ಒಟ್ಟು 6 ಠಾಣೆಗಳು ಉಪವಿಭಾಗದಲ್ಲಿ ಸೇರ್ಪಡೆಗೊಳ್ಳಲಿದೆ. ಇಲಾಖೆ ಸದ್ಯ  ಇರುವ ಕಟ್ಟಡವನ್ನೇ ಉಪವಿಭಾಗಗಳನ್ನಾಗಿ ನಿರ್ಮಿಸಲು ತೀರ್ಮಾನಿಸಿದೆ. ಆದರೆ ಸಿಬ್ಬಂದಿ ನೇಮಕ ಮತ್ತು ಕಟ್ಟಡ ನಿರ್ಮಾಣದ ಬಗ್ಗೆ ಸರ್ಕಾರ ಯಾವುದೇ ಸೂಚನೆ ನೀಡಿಲ್ಲ.
ತಾಲೂಕಿನಲ್ಲಿ ಸಿಬ್ಬಂದಿ ಕೊರತೆ: ಜಿಲ್ಲೆಯ ಬಂಟ್ವಾಳ ತಾಲೂಕು ಅತಿ ಸೂಕ್ಷ್ಮ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯ ಅಗತ್ಯವಿದೆ. ಕಲ್ಲಡ್ಕ, ಬಿ.ಸಿ.ರೋಡ್, ಫರಂಗಿಪೇಟೆ, ಬಂಟ್ವಾಳ ಪ್ರದೇಶಗಳಲ್ಲಿ ನಡೆಯುವ ಕೋಮು ಗಲಭೆ ಸಂದರ್ಭ ನಿಯಂತ್ರಣಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ಮಂಗಳೂರು, ಪುತ್ತೂರಿನಿಂದ ಬರಮಾಡಿಕೊಳ್ಳಬೇಕಾಗಿತ್ತು.
ಸದ್ಯ ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ಗ್ರಾಮಾಂತರ, ನಗರ, ವಿಟ್ಲ, ಪುಂಜಾಲಕಟ್ಟೆ ಠಾಣೆಗಳು, ಹೊರ ಠಾಣೆಗಳಾದ ಫರಂಗಿಪೇಟೆ, ಕಲ್ಲಡ್ಕ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದರ ಜತೆಗೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿ ಕೋರ್ಟ್, ಟ್ರಾಫಿಕ್, ಆಕ್ಸಿಡೆಂಟ್, ಗಣ್ಯ ವ್ಯಕ್ತಿಗಳ ಆಗಮನದ ಸಂದರ್ಭ ರಕ್ಷಣೆ ಮಾಡುವ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.
ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 32 ಗ್ರಾಮಗಳಿದ್ದು, ಇರುವ ಸಿಬ್ಬಂದಿ 30 ಮಾತ್ರ. ಇದರಲ್ಲಿ ಒಬ್ಬ ಪಿಎಸ್‌ಐ, 3 ಮಂದಿ ಎಎಸ್‌ಐ ಇದ್ದಾರೆ. ಬಡ್ಡಕಟ್ಟೆ, ಕಲ್ಲಡ್ಕ ಮತ್ತು ಫರಂಗಿಪೇಟೆ ಸೂಕ್ಷ್ಮ ಪ್ರದೇಶವಾಗಿದೆ.
ಅಪರಾಧ ಪ್ರಕರಣ ಹೆಚ್ಚಳ: ಇತ್ತೀಚಿನ ದಿನಗಳಲ್ಲಿ ಬಂಟ್ವಾಳ, ವಿಟ್ಲ ಮತ್ತು ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳ್ಳತನ, ದರೋಡೆ, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚಾಗಿವೆ.
ಇದಕ್ಕೆ ಪೂರಕವಾಗಿ ಕೆಲವು ತಿಂಗಳುಗಳ ಹಿಂದೆ ಮಾರಿಪಳ್ಳದ ಬಳಿ ಮಾದಕ ದ್ರವ್ಯ ಸಾಗಾಟದ ಆರೋಪಿಯನ್ನು ಬಂಧಿಸಿ ಜೀಪಿನಲ್ಲಿ ಠಾಣೆಗೆ ಕರೆದುಕೊಂಡು ಹೋಗುವ ಸಂದರ್ಭ ಆತ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಿಬ್ಬಂದಿಗಳಿಗೆ ತೀವ್ರ ಗಾಯ ಉಂಟುಮಾಡಿದ್ದನ್ನು ನೆನಪಿಸಬಹುದು.
ಸಂಚಾರಿ ಪೊಲೀಸ್ ಠಾಣೆಗಳ ಅಗತ್ಯ: ಹಲವು ವರ್ಷಗಳಿಂದ ಸಂಚಾರಿ ಪೊಲೀಸ್ ಠಾಣೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಫರಂಗಿಪೇಟೆಯಿಂದ ಮಾಣಿ ತನಕ ಯಾವುದೇ ಅಪಘಾತ ಸಂಭವಿಸಿದಾಗಲೂ ಬಂಟ್ವಾಳ ಪೊಲೀಸ್ ಸಿಬ್ಬಂದಿಯೇ ತೆರಳಬೇಕಾಗುತ್ತದೆ. ಇವುಗಳನ್ನು ನಿರ್ವಹಿಸಲು ಸಂಚಾರಿ ಪೊಲೀಸರ ಅಗತ್ಯವಿದ್ದು, ಪೊಲೀಸ್ ಸಿಬ್ಬಂದಿ ಹೊರೆ ಕಡಿಮೆಯಾಗಬಹುದು.
ಬಿ.ಸಿ.ರೋಡಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ನೂರಾರು ವಾಹನಗಳು ಓಡಾಡುತ್ತಿರುತ್ತದೆ. ಮದುವೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ನಿಯಂತ್ರಿಸಲು ಅಸಾಧ್ಯವಾಗಿರುತ್ತದೆ. ಕೆಲವೊಮ್ಮೆ ಮೈಲುಗಟ್ಟಲೆ ವಾಹನ ಸಾಲುಗಟ್ಟಿ ನಿಂತಿರುತ್ತದೆ. ವಾಹನ ದಟ್ಟಣೆ ನಿಯಂತ್ರಿಸಲು ಅಗತ್ಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇಲ್ಲ.ಪ್ರತಿದಿನ ಇಬ್ಬರು ಮಹಿಳಾ ಅಥವಾ ಪುರುಷ ಪೊಲೀಸ್ ಕಾನ್‌ಸ್ಟೇಬಲ್‌ಗಳು ಕಾರ್ಯನಿರ್ವಹಿಸುತ್ತಾರೆ.
ಬಂಟ್ವಾಳ ತಾಲೂಕಿನ ಬಹುದಿನದ ಕನಸು ನನಸಾಗುತ್ತಿದೆ. ಸರ್ಕಾರದಿಂದ ದೊರೆತ ಅನುಮತಿ ಅನ್ವಯ ಸದ್ಯ ಇರುವ ವ್ಯವಸ್ಥೆಯಲ್ಲೇ ಉಪವಿಭಾಗ ರಚಿಸಬೇಕಾದ ಅನಿವಾರ್ಯತೆ ಪೊಲೀಸ್ ಇಲಾಖೆಯದ್ದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement