ಬಿಜೆಪಿ,ಕಾಂಗ್ರೆಸ್ ಬಂಡಾಯ ಬಿಸಿ ಜೆಡಿಎಸ್ಗೆ ಪಕ್ಷೇತರರು ವಸಿ
ಆತ್ಮಭೂಷಣ್
ಮಂಗಳೂರು: ಈ ಬಾರಿ ಪಾಲಿಕೆಯ ಎಲ್ಲ 60 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಕಣಕ್ಕಿಳಿಸಿದೆ. ಎಲ್ಲ ವಾರ್ಡ್ಗಳಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದ ಜೆಡಿಎಸ್ ಕೊನೆಕ್ಷಣದಲ್ಲಿ ನಿರ್ಧಾರದಿಂದ ಹಿಂದೆ ಸರಿದು, ಕೇವಲ 51 ವಾರ್ಡ್ಗೆ ಸ್ಪರ್ಧೆಯನ್ನು ಸೀಮಿತಗೊಳಿದೆ. ಸಿಪಿಐಎಂ 14 ವಾರ್ಡ್ಗಳತ್ತ ದೃಷ್ಟಿ ನೆಟ್ಟರೆ, ಇತರೆ ಪಕ್ಷಗಳೂ ಅಲ್ಲಲ್ಲಿ ತಮ್ಮ ಅಸ್ತಿತ್ವ ಸಾಬೀತಿಗೆ ಪ್ರಯತ್ನಿಸುತ್ತಿವೆ.
ಬಿಜೆಪಿ, ಕಾಂಗ್ರೆಸ್ಗೆ ಬಂಡಾಯ ಬಿಸಿ: ಎಲ್ಲರಿಗಿಂತ ಮೊದಲು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಬಿಜೆಪಿಗೆ ಬಂಡಾಯ ಬಿಸಿ ತಟ್ಟಿದೆ. ಸುದ್ದಿಗೋಷ್ಠಿಯಲ್ಲೇ ಭಿನ್ನ ಸ್ವರ ಎಬ್ಬಿಸಿದ ಕಾಂಗ್ರೆಸ್ ಕೂಡ ಇದರಿಂದ ಹೊರತಾಗಿಲ್ಲ.
ಹೈಗೆ ಬಜಾರ್ನಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ದಿವ್ಯ ಪೈ ವಿರುದ್ಧ ಮಾಜಿ ಸದಸ್ಯೆ ಪ್ರೇಮ ಮುರಳೀಧರ್ ಬಂಡಾಯ ಸಾರಿದ್ದಾರೆ. ಬೋಳಾರದಲ್ಲಿ ಅಭ್ಯರ್ಥಿ ಗೀತಾಗೆ ಎದುರಾಗಿ ಮಾಜಿ ಸದಸ್ಯೆ ರಾಜಶ್ರೀ ತಡೆ ಒಡ್ಡಲಿದ್ದಾರೆ.
ಕಾಂಗ್ರೆಸ್ನಲ್ಲಿ ಕೋರ್ಟ್ ವಾರ್ಡ್ ಅಭ್ಯರ್ಥಿ ವಿನಯರಾಜ್ ವಿರುದ್ಧ ಇಬ್ಬರು ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್ನ ಮಾಜಿ ಸದಸ್ಯ ಪ್ರೇಮಚಂದ್ರ ಹಾಗೂ ವಾರ್ಡ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಮರೋಳಿ ವಾರ್ಡ್ ಕೂಡ ಕಾಂಗ್ರೆಸ್ಗೆ ಮುಳ್ಳಾಗಿ ಪರಿಣಮಿಸಿದೆ. ಬಿಜೆಪಿಯಿಂದ ಕಾಂಗ್ರೆಸ್ಗೆ ಟಿಕೆಟ್ ಸಿಗುವ ನಂಬಿಕೆಯಲ್ಲಿ ಜಿಗಿದಿದ್ದ ಜೇಮ್ಸ್ ಡಿಸೋಜ ಬಂಡಾಯ ಸ್ಪರ್ಧೆಗೆ ಇಳಿದಿದ್ದಾರೆ.
ಪಂಜಿಮೊಗರು ಕೈಬಿಟ್ಟ ಕಾಂಗ್ರೆಸ್: ಕಳೆದ ಚುನಾವಣೆಯಲ್ಲಿ ಪಂಜಿಮೊಗರು ವಾರ್ಡ್ನಲ್ಲಿ ಸಿಪಿಐಎಂನ್ನು ಬೆಂಬಲಿಸಿದ ಕಾಂಗ್ರೆಸ್ 59 ವಾರ್ಡ್ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಬಾರಿ ಪಂಜಿಮೊಗರಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಸಿಪಿಐಎಂ ಬೆಂಬಲಿಸಿದರೂ ಗೆಲವು ತಪ್ಪಿಹೋಗಿತ್ತು. ಹಾಗಾಗಿ ಕಾಂಗ್ರೆಸ್ ಎಲ್ಲ 60 ವಾರ್ಡ್ಗಳಲ್ಲೂ ಸ್ಪರ್ಧಿಸುತ್ತಿದೆ. ಇಲ್ಲಿ ಸಿಪಿಐಎಂ ಜತೆ ಜೆಡಿಎಸ್ ಕೈಜೋಡಿಸಿದೆ. ಕಳೆದ ಸಲದಂತೆ ಈ ಸಲವೂ ಸಿಪಿಐ ಇದೇ ವಾರ್ಡ್ಗೆ ಸ್ಪರ್ಧಿಸುತ್ತಿದೆ.
ಮಾತುತಪ್ಪಿದ ಜೆಡಿಎಸ್: ಎಲ್ಲ ವಾರ್ಡ್ಗಳಲ್ಲಿ ಜೆಡಿಎಸ್ ಸ್ಪರ್ಧಿಸುವುದಾಗಿ ಮುಖಂಡರು ಹೇಳಿದ ಮಾತು ತಪ್ಪಿದ್ದಾರೆ. ಕಳೆದ ಸಲ 24 ವಾರ್ಡ್ ಪೈಕಿ ಒಂದರಲ್ಲಿ ಜಯಿಸಿದ್ದರು. ಈ ಸಲ 51 ವಾರ್ಡ್ಗೆ ನೆಗೆದಿದ್ದಾರೆ. ಆದರೆ ಸ್ವತಂತ್ರ ಹಾಗೂ ಸಿಪಿಐಎಂ ಅಭ್ಯರ್ಥಿಗೆ ಬೆಂಬಲ ಸೂಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. 8 ಮಂದಿ ಸ್ವತಂತ್ರ ಅಭ್ಯರ್ಥಿಗಳಲ್ಲಿ ಯಾರನ್ನೆಲ್ಲ ಬೆಂಬಲಿಸಬೇಕು ಎಂಬುದು ತೀರ್ಮಾನವಾಗಿಲ್ಲ ಎನ್ನುತ್ತಾರೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ.
ಕಳೆದ ಬಾರಿ 5 ವಾರ್ಡ್ನಲ್ಲಿ ಸ್ಪರ್ಧಿಸಿದ್ದ ಸಿಪಿಐಎಂ, ಈ ಸಲ 14 ವಾರ್ಡ್ಗೆ ಕಣ್ಣಿಟ್ಟಿದೆ. ಆಗ ಗೆದ್ದದ್ದು 1 ವಾರ್ಡ್. ಜಪ್ಪಿನಮೊಗರು, ಪಂಜಿಮೊಗರಲ್ಲಿ ಸ್ವಲ್ಪ ಅಂತರದಲ್ಲಿ ಗೆಲವು ತಪ್ಪಿತ್ತು. ಕಂಕನಾಡಿ, ಪದವು ವಾರ್ಡ್ಗಳಲ್ಲಿ ನಿರ್ಣಾಯಕವಾಗಿದ್ದವು. ಇವೆಲ್ಲವನ್ನು ಗೆಲ್ಲುವ ವಿಶ್ವಾಸ ಇದೆ ಎನ್ನುತ್ತಾರೆ ಸಿಪಿಐಎಂ ಮುಖಂಡ ಸುನೀಲ್ ಕುಮಾರ್ ಬಜಾಲ್.
ಬಿಜೆಪಿ ಕ್ರೈಸ್ತ ಅಭ್ಯರ್ಥಿ ಇಲ್ಲ: ಈ ಬಾರಿ ಅಲ್ಪಸಂಖ್ಯಾತರ ಪೈಕಿ ಬಿಜೆಪಿ ಟಿಕೆಟ್ ನೀಡಿದ್ದು ಒಬ್ಬರಿಗೆ, ಅದೂ ಕುದ್ರೋಳಿ ವಾರ್ಡ್ನಲ್ಲಿ ಮುಸ್ಲಿಂ ಅಭ್ಯರ್ಥಿ ಅನ್ವರ್ ರಿಕೋಗೆ. ಆದರೆ ಎಲ್ಲಿಯೂ ಕ್ರೈಸ್ತರಿಗೆ ಟಿಕೆಟ್ ನೀಡಿಲ್ಲ. ಮರೋಳಿಯಲ್ಲಿ ಗೆದ್ದಿದ್ದ ಜೇಮ್ಸ್ ಡಿಸೋಜ ಪಕ್ಷ ಬಿಟ್ಟಿದ್ದಾರೆ, ಆದರೆ ವಾರ್ಡ್ ಅಭಿಪ್ರಾಯ ಮೇರೆಗೆ ಟಿಕೆಟ್ ನೀಡಲಾಗಿದೆ ವಿನಾ ಬೇರೆ ಯಾವುದೇ ಕಾರಣ ಇಲ್ಲ. ಕಂಕನಾಡಿಯಲ್ಲಿ ಜೈನ ಸಮುದಾಯಕ್ಕೆ ಸೇರಿದ ಪ್ರಭಾಮಾಲಿನಿಗೆ ಟಿಕೆಟ್ ನೀಡಲಾಗಿದೆ ಎನ್ನುತ್ತಾರೆ ಜಿಲ್ಲಾ ವಕ್ತಾರ ಮೋನಪ್ಪ ಭಂಡಾರಿ.