ಮಂಗಳೂರು: ಪತ್ರಕರ್ತರ ವಾರ್ಷಿಕ ಕ್ರೀಡೋತ್ಸವ
ಮಂಗಳೂರು: ಪೆನ್ನು, ಪುಸ್ತಕ, ಕ್ಯಾಮರಾ, ಹಿಡಿದು ಸುದ್ದಿಗಾಗಿ ಓಡಾಡುವ ಪತ್ರಕರ್ತರು ಒಟ್ಟಾಗಿ ಅಲೋಶಿಯಸ್ ಮೈದಾನದಲ್ಲಿ ಕ್ರಿಕೆಟ್, ಓಟ, ಇನ್ನಿತರ ಕ್ರೀಡೆಗಳಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪ್ರೆಸ್ ಕ್ಲಬ್ ವತಿಯಿಂದ ಭಾನುವಾರ ವಾರ್ಷಿಕ ಕ್ರೀಡೋತ್ಸವ ಆಯೋಜಿಸಿತ್ತು. ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ ಉದ್ಘಾಟಿಸಿದರು. ಅರ್ಜುನ ಪ್ರಶಸ್ತಿ ವಿಜೇತೆ ವಂದನಾ ಶಾನ್ಬಾಗ್, ಅಂತಾರಾಷ್ಟ್ರೀಯ ಕ್ರೀಡಾಪಟು ಆನಂದ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಂತಾರಾಷ್ಟ್ರೀಯ ವೇಟ್ ಲಿಫ್ಟರ್ ಗೀತಾಭಾಯಿ, ಭಿನ್ನ ಸಾಮರ್ಥ್ಯದ ಅಂತಾರಾಷ್ಟ್ರೀಯ ಸ್ಕೇಟಿಂಗ್ ಪಟುಗಳಾದ ರಾಯಿಸನ್ ಪಿಂಟೋ, ಧನ್ಯಾ ಎಸ್ ರಾವ್ ಅವರನ್ನು ಸನ್ಮಾನಿಸಲಾಯಿತು. ಮಹಿಳೆಯರಿಗಾಗಿ ಬಾಳೆ ಹಣ್ಣು, ಐಸ್ಕ್ರೀಂ ತಿನ್ನುವ ಸ್ಪರ್ಧೆ, ಮೈದಾ ಹಿಟ್ಟಿನಲ್ಲಿ ನಾಣ್ಯ ಹುಡುಕುವುದು, ಸಂಗೀತ ಕುರ್ಚಿ, ಹಗ್ಗಜಗ್ಗಾಟ, 200, 100 ಮೀ ಓಟ ಸ್ಪರ್ಧೆ ಆಯೋಜಿಸಲಾಗಿತ್ತು. 5 ಒವರ್ಗಳ ಕ್ರಿಕೆಟ್ನಲ್ಲಿ ನಾಲ್ಕು ತಂಡ ಪಾಲ್ಗೊಂಡಿದ್ದವು. ಕೊನೆಯ ಪ್ರದರ್ಶನದಲ್ಲಿ ನಮ್ಮ ಕುಡ್ಲ ಮತ್ತು ಮೀಡಿಯಾ ಫ್ರೆಂಡ್ಸ್ ತಂಡಕ್ಕೆ ಹಣಾಹಣಿ ನಡೆದಿದ್ದು, ಮೀಡಿಯಾ ಫ್ರೆಂಡ್ಸ್ ಜಯ ಗಳಿಸಿತು. ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪ್ರೆಸ್ಕ್ಲಬ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರಧಾನ ಕಾರ್ಯದರ್ಶಿ ಕಿರಣ್ ಸಿರ್ಸೀಕರ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು.