ವಸತಿ ಸಮುಚ್ಚಯ ನಿವಾಸಿಗಳಿಗೆ ಪರಿಹಾರ ಆದೇಶ
ಮಂಗಳೂರು: ಕೊಡಿಯಾಲ್ಗುತ್ತು ಪ್ರದೇಶದ ಅನನ್ಯ ವಸತಿ ಸಮುಚ್ಚಯದ ನಿರ್ಮಾಣ ಯೋಜನೆಯ ದಾಖಲೆ ಪತ್ರಗಳನ್ನು ನೀಡಲು ಹಾಗೂ ಕಾಮಗಾರಿಯಲ್ಲಿನ ದುರಸ್ತಿ ಸರಿಪಡಿಸಲು ವಿಫಲರಾದ ಅಪೂರ್ವ ಬಿಲ್ಡರ್ಸ್ ಸಂಸ್ಥೆಯ ಮಾಲಕ ಗಣೇಶ್ ಶೆಟ್ಟಿಯವರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ಕಟ್ಟಡ ನಿವಾಸಿಗಳಿಗೆ ತಲಾ ರು. 25ಸಾವಿರ ಪರಿಹಾರ ನೀಡುವಂತೆ ಆದೇಶಿಸಿದೆ.
ಅಪಾರ್ಟ್ಮೆಂಟ್ ನಿವಾಸಿಗಳಿಗೆ ಫ್ಲ್ಯಾಟ್ ಮುಂಗಡ ಕಾಯ್ದಿರಿಸುವ ವೇಳೆ ಎಲ್ಲಾ ತರಹದ ಸೌಲಭ್ಯ ಒದಗಿಸುವುದಾಗಿ ಮಾಲಕರು ಕರಾರು ಪತ್ರದಲ್ಲಿ ಭರವಸೆ ನೀಡಿದ್ದು, ಕ್ರಮೇಣ ವಂಚಿಸಿದ್ದರು. ಅಲ್ಲದೆ, ಸಂಕೀರ್ಣವು ಪಾಲಿಕೆಯ ಷರತ್ತು, ಕಾನೂನು ಉಲ್ಲಂಘಿಸಿ ಅನುಮತಿ ಇಲ್ಲದೆ ಅಕ್ರಮವಾಗಿ ನಿರ್ಮಾಣಗೊಂಡಿದೆ.
ಈ ಸಮಸ್ಯೆಯ ಕುರಿತು ಫ್ಲಾಟ್ ನಿವಾಸಿಗಳು ಪ್ರಕರಣವನ್ನು ಲಿಖಿತ ದೂರಿನಲ್ಲಿ 9-9-2011ರಲ್ಲಿ ವೇದಿಕೆಗೆ ದಾಖಲೆ ಸಮೇತ ಸಲ್ಲಿಸಿದ್ದರು.
ಜ.31 ರಂದು ವಿಚಾರಣೆ ಕೈಗೆತ್ತಿಗೊಂಡ ನ್ಯಾಯಾಲಯ ಸಂಕೀರ್ಣದಲ್ಲಿರುವ ಲೋಪದೋಷಗಳನ್ನು ದುರಸ್ತಿಗೊಳಿಸಬೇಕು ಹಾಗೂ ರು. 25ಸಾವಿರ ನಷ್ಟ ಪರಿಹಾರ ಮತ್ತು ರು. 2ಸಾವಿರ ನ್ಯಾಯಾಲಯ ವೆಚ್ಚ, 3 ತಿಂಗಳೊಳಗೆ ಕಟ್ಟಡ ಪ್ರವೇಶ ಪತ್ರ ಪಾಲಿಕೆಯಿಂದ ತೆಗೆಸಿಕೊಡಬೇಕು ಎಂದು ಆದೇಶಿಸಿದೆ.