ಸುತ್ತಮುತ್ತಲ ಅನೈತಿಕತೆ ಕುರಿತು ಮೌನವೇಕೆ: ಶಕುಂತಳಾ ಶೆಟ್ಟಿ
ಬೆಳ್ತಂಗಡಿ: ಎಲ್ಲೋ ನಡೆಯುತ್ತಿರುವ ದುಷ್ಕೃತ್ಯಗಳಿಗೆ ದನಿ ಎತ್ತುತ್ತಿರುವ ನಾವು ನಮ್ಮ ಸುತ್ತಮುತ್ತಲಿನ ಅನೈತಿಕತೆಯನ್ನು ನೋಡಿಯೂ ಮೌನವಾಗಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪ್ರಶ್ನಿಸಿದ್ದಾರೆ.
ಉಜಿರೆಯ ಶಾರದಾ ಮಂಟಪದಲ್ಲಿ ನಡೆದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ಆಯೋಜಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿಚಾರ ಸಂಕಿರಣ 'ಆಧುನಿಕ ಭಾರತದಲ್ಲಿ ಮಹಿಳಾ ಸುರಕ್ಷತೆ' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹೆಣ್ಣನ್ನು ಗೌರವದಿಂದ ನೋಡಬೇಕಾದ ಈ ಜಗತ್ತಿನಲ್ಲಿ ಹೆಣ್ಣು ಭೋಗದ ವಸ್ತುವಾಗಿರುವುದು ವಿಷಾದದ ಸಂಗತಿ ಎಂದು ಶಕುಂತಳಾ ಶೆಟ್ಟಿ ಖೇದ ವ್ಯಕ್ತಪಡಿಸಿದರು.
ಅಭಾವಿಪ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ಅಧ್ಯಕ್ಷತೆ ವಹಿಸಿದ್ದರು. ಅಭಾವಿಪ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಮುಖ್ಯ ಅತಿಥಿಯಾಗಿದ್ದರು. ರಾಜ್ಯ ಕಾರ್ಯಕಾರಿಣಿ ಸದಸ್ಯೆ ಅಕ್ಷತಾ ಕೆ.ಎಂ. ಸ್ವಾಗತಿಸಿದರು. ಧರ್ಮರಾಜ್ ವಂದಿಸಿದರು. ಸ್ವಾತಿ ನಿರೂಪಿಸಿದರು.
ವಿಚಾರ ಸಂಕಿರಣದ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಳ್ತಂಗಡಿ ತಾಲೂಕಿನ ಸಾಮಾಜಿಕ ಕಾರ್ಯಕರ್ತೆ ಶಾರದಾ ರೈ ವಹಿಸಿದ್ದರು. ಗೋಷ್ಠಿಯಲ್ಲಿ ಮಹಿಳಾ ಸುರಕ್ಷತೆ ಮತ್ತು ಕಾನೂನು ಎಂಬ ವಿಚಾರದ ಬಗ್ಗೆ ಬಂಟ್ವಾಳದ ನ್ಯಾಯವಾದಿ ಆಶಾ ಪ್ರಸಾದ್ ಮಾತನಾಡಿದರು.'ಮಹಿಳೆ ಸುರಕ್ಷತೆ ಮತ್ತು ಮಾಧ್ಯಮ' ಎಂಬ ವಿಚಾರದ ಬಗ್ಗೆ 'ಮ್ಯಾಂಗಲೋರಿಯನ್ ಡಾಟ್ ಕಾಮ್'ನ ವೈಲೆಲ್ ಪಿರೇರ ವಿಷಯ ಮಂಡಿಸಿದರು.
2ನೇ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಳ್ತಂಗಡಿಯ ನ್ಯಾಯವಾದಿ ಸ್ವರ್ಣಲತಾ ವಹಿಸಿದ್ದರು. ಶಿಕ್ಷಣ ಸಂಸ್ಥೆಗಳು ಮತ್ತು ಮಹಿಳಾ ಸುರಕ್ಷತೆ ಎಂಬ ವಿಚಾರದ ಬಗ್ಗೆ ಕರ್ನಾಟಕ ಮುಕ್ತ ವಿವಿ ಸಿಂಡಿಕೇಟ್ ಸದಸ್ಯೆ ಯಶೋಧಾ ರಾಮಚಂದ್ರ ಮಾತನಾಡಿದರು. ಮಹಿಳೆ ಸುರಕ್ಷತೆಯಲ್ಲಿ ಸಮಾಜದ ಸಹಭಾಗಿತ್ವ ಎಂಬ ವಿಚಾರದ ಬಗ್ಗೆ ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್ನ ವಿದ್ಯಾ ನಾಯಕ್ ವಿಷಯ ಮಂಡಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಧ್ಯಾಪಕಿ ಜಯಮಾಲ ವಹಿಸಿದ್ದರು. ಅಭಾವಿಪ ರಾಜ್ಯ ಉಪಾಧ್ಯಕ್ಷ ರೋಹಿಣಾಕ್ಷ ಶಿರ್ಲಾಲು ಸಮಾರೋಪ ಭಾಷಣ ಮಾಡಿದರು. ಸಮಾರೋಪದಲ್ಲಿ ಧರ್ಮಸ್ಥಳ ಬಳಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ನಿರ್ಣಯ ತೆಗೆದುಕೊಳ್ಳಲಾಯಿತು.