ಸುದ್ದಿ ಸಂಕ್ಷೇಪ
ರಾ.ಸೇವಾ ಯೋಜನೆ ಪ್ರಶಸ್ತಿಗೆ ಆಯ್ಕೆ
ಉಡುಪಿ: ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಮಂಗಳೂರು ವಿವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು 2011- 12ನೇ ಸಾಲಿನ 'ರಾಜ್ಯದ ಅತ್ಯುತ್ತಮ ರಾ.ಸೇ. ಯೋಜನಾ ಪ್ರಶಸ್ತಿ'ಗಳನ್ನು ಗೆದ್ದುಕೊಂಡಿವೆ. ವಿಶ್ವವಿದ್ಯಾನಿಲಯ ಕಾಲೇಜಿನ ರಾ.ಸೇ.ಯೋ. ಘಟಕದ ಸ್ವಯಂ ಸೇವಕ ರಾಕೇಶ್ 'ಅತ್ಯುತ್ತಮ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ' ಪಡೆದಿದ್ದಾರೆ. ಅಲ್ಲದೇ ಮಂಗಳೂರು ವಿವಿ ವ್ಯಾಪ್ತಿಯಲ್ಲಿ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕಿ ಡಾ. ನಿಕೇತನ ಮತ್ತು ಮಂಗಳೂರಿನ ವಿವಿ ಕಾಲೇಜಿನ ಹಿಂದಿ ವಿಭಾಗದ ಪ್ರಾಧ್ಯಾಪಕಿ ಡಾ. ನಾಗರತ್ನ ಎನ್. ರಾವ್ ಅತ್ಯುತ್ತಮ ಯೋಜನಾಧಿಕಾರಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಫೆ. 25ರಂದು ಬೆಂಗಳೂರಿನ ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.