ಕಾಡಾನೆ ದಾಳಿಯಿಂದ ರಕ್ಷಿಸಲು ಮನವಿ
ಸುಬ್ರಹ್ಮಣ್ಯ: ಸುಳ್ಯ ತಾಲೂಕು ಹರಿಹರ ಪಲ್ಲತ್ತಡ್ಕ ಪ್ರದೇಶದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಒಂಟಿ ಸಲಗವೊಂದು ಹಲವಾರು ತಿಂಗಳುಗಳಿಂದ ಜೀವಹಾನಿ ಮತ್ತು ಬೆಳೆಹಾನಿ ಮಾಡುತ್ತಾ ನಿರ್ಭೀತಿಯಿಂದ ಸಂಚರಿಸುತ್ತಿದೆ. ಈ ಸಲಗವನ್ನು ಅರಣ್ಯ ಇಲಾಖೆಯವರು ಹಿಡಿದು ಆನೆ ಶಿಬಿರಕ್ಕೆ ಸೇರಿಸಿಬೇಕೆಂದು ಸ್ಥಳೀಯರಾದ ದುರ್ಗಾದಾಸ್ ಮಲ್ಲಾರ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆನೆಯಿಂದ ಸಾರ್ವಜನಿಕರು ಹಗಲು ಕೂಡ ಹೊರಗೆ ಒಂಟಿಯಾಗಿ ಓಡಾಡಲು ಹೆದರುತ್ತಿದ್ದಾರೆ. ಆನೆಯನ್ನು ಹಿಡಿಯದಿದ್ದರೆ ಮುಂದೆ ಮತ್ತಷ್ಟು ಬೆಳೆಹಾನಿ, ಪ್ರಾಣಹಾನಿಯಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಹೇಳಿದ್ದಾರೆ.