ದರೋಡೆ: 6 ಮಂದಿ ಖುಲಾಸೆ
ಪುತ್ತೂರು: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ಎರಡು ವರ್ಷದ ಹಿಂದೆ ಜೀಪೊಂದನ್ನು ತಡೆದು ನಿಲ್ಲಿಸಿ ದರೋಡೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ 6 ಮಂದಿ ಆರೋಪಿಗಳನ್ನು ಪುತ್ತೂರು ತ್ವರಿತಗತಿ ನ್ಯಾಯಾಲಯ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ. ರವಿ, ಜಯರಾಜ್ ಸಾಲಿಯಾನ್, ರಮೇಶ, ನಾರಾಯಣ ಶೆಟ್ಟಿ, ಲೋಕೇಶ ಆಚಾರ್ಯ ಮತ್ತು ಪ್ರಸಾದ್ ಆರೋಪದಿಂದ ಮುಕ್ತಗೊಂಡವರು. ಆರೋಪಿಗಳು 2010, ಅ.10ರಂದು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂತಡ್ಕ ಎಂಬಲ್ಲಿ ಮಹಮ್ಮದ್ ಎಂಬವರು ಚಲಾಯಿಸುತ್ತಿದ್ದ ಜೀಪನ್ನು ತಡೆದು ನಿಲ್ಲಿಸಿ ಜಖಂಗೊಳಿಸಿ ಮುಹಮ್ಮದ್ ಅವರ ಬಳಿಯಿದ್ದ ಹಣವನ್ನು ದರೋಡೆ ಮಾಡಿರುವ ಆರೋಪವಿತ್ತು. ಬೆಳ್ತಂಗಡಿ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರು ತ್ವರಿತಗತಿ ನ್ಯಾಯಾಲಯ ಇದೀಗ ಆರೋಪಿಗಳನ್ನು ನಿರಪರಾಧಿಗಳೆಂದು ಪರಿಗಣಿಸಿ ದೋಷಮುಕ್ತಗೊಳಿಸಿ ತೀರ್ಪು ನೀಡಿದೆ.
ಪ್ರತ್ಯೇಕ ಹಲ್ಲೆ ಪ್ರಕರಣ: ಮೂವರಿಗೆ ಗಾಯ
ಬೆಳ್ತಂಗಡಿ: ನ್ಯಾಯತರ್ಪು ಗ್ರಾಮದ ಓಡಿಲ್ನಾಳ ಎಂಬಲ್ಲಿ ಎರಡು ಪ್ರತ್ಯೇಕ ಹಲ್ಲೆ ಪ್ರಕರಣಗಳು ಭಾನುವಾರ ನಡೆದಿವೆ. ಗ್ರಾಮದ ಅಸ್ಮಾ ಎಂಬುವರ ಮನೆಗೆ ಮೇಲೆ ಪ್ರಶಾಂತ, ದೇವಪ್ಪ, ಚಂದ್ರಕಾಂತ, ಮನೋಜ್ ಎಂಬುವರು ಅಕ್ರಮ ಪ್ರವೇಶಗೈದು ಮನೆಯಂಗಳದಲ್ಲಿದ್ದ ಕುರ್ಚಿ, ಟ್ಯೂಬ್ ಲೈಟ್‌ಗಳನ್ನು ಪುಡಿಗಟ್ಟಿದ್ದಾರೆ. ಅಲ್ಲದೆ ಅಸ್ಮಾ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ಅದೇ ಗ್ರಾಮದ ಮನೋಜ್ ಎಂಬುವರಿಗೆ ರವೂಫ್ ಎಂಬಾತ ಕಲ್ಲಿನಿಂದ ಗುದ್ದಿ ಗಂಭೀರ ಗಾಯಗೊಳಿಸಿದ್ದಾರೆ. ರವೂಫ್ ಜೊತೆಗೆ ಹಕೀಂ, ಹೈದರ್, ಜಾವೇದ್ ಹಾಗೂ ಇತರರೂ ಇದ್ದರು. ಈ ಸಂದರ್ಭ ತಡೆಯಲು ಬಂದ ಮನೋಜ್‌ನ ಪತ್ನಿ ಶೋಭಾ, ಅತ್ತೆ ವನಜಾ ಮೇಲೆಯೂ ಹಲ್ಲೆ ನಡೆಸಲಾಗಿದೆ. ಈ 2 ಪ್ರಕರಣಗಳ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪುತ್ತೂರು: ಬಸ್ ಡಿಕ್ಕಿ ಹೊಡೆದು ವೃದ್ಧ ಸಾವು
ಪುತ್ತೂರು: ಪುತ್ತೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ಸೊಂದು ಹಿಂದಿನಿಂದ ಡಿಕ್ಕಿ ಹೊಡೆದು ಬಸ್‌ಗಾಗಿ ಕಾಯುತ್ತಿದ್ದ ವೃದ್ಧರೊಬ್ಬರು ಮೃತಪಟ್ಟ ಘಟನೆ ಭಾನುವಾ ನಡೆದಿದೆ. ಬಂಟ್ವಾಳ ತಾಲೂಕಿನ ಕಡೇ ಶಿವಾಲಯದ ನಿವಾಸಿ ಬಾಬು ನಾಯ್ಕ (75) ಮೃತಪಟ್ಟವರು. ಬಾಬು ನಾಯ್ಕ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದಾಗ ಉಪ್ಪಿನಂಗಡಿಯಿಂದ ಬಂದು ಸುಳ್ಯ ದರ್ಬೆ ಕಡೆಗೆ ಹೋಗಬೇಕಾಗಿದ್ದ ಬಸ್ಸನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮವಾಗಿ ಈ ದುರಂತ ಸಂಭವಿಸಿದೆ. ಬಸ್ಸಿನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಬಾಬು ನಾಯ್ಕ ಅವರನ್ನು ಪುತ್ತೂರಿನ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಬಸ್ ಚಾಲಕ ಶೇಸಪ್ಪ ಗೌಡ ಅವರ ವಿರುದ್ಧ ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಕಸ್ಮಿಕವಾಗಿ ಬಿದ್ದು ಸಾವು
ಹೆಬ್ರಿ: ಆಕಸ್ಮಿಕವಾಗಿ ಕಾಲು ಜಾರಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಹೆಬ್ರಿಯ ನಾಡ್ಪಾಲು ಗ್ರಾಮದಲ್ಲಿ ಭಾನುವಾರ ನಡೆದಿದೆ. ಇಲ್ಲಿನ ನಿವಾಸಿ ಚಂದ್ರಯ್ಯ ಆಚಾರಿ ಮೃತರು. ಇವರು ಕೃಷಿ ಕೆಲಸ ಮಾಡಿಕೊಂಡಿದ್ದು, ಭಾನುವಾರ ತನ್ನ ಮನೆಯ ಸಮೀಪದ ಗದ್ದೆಯ ಬದಿಯಲ್ಲಿದ್ದ ಹುಲ್ಲು ಸವರಿ ಬರುತ್ತೇನೆ ಎಂದು ಹೇಳಿ ಹೋದವರು ರಾತ್ರಿಯಾದರೂ ಮನೆಗೆ ಬಾರದೇ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಡಿದಾಗ ಚಂದ್ರಯ್ಯ ಆಚಾರಿ ಅವರು ಶವ ಗದ್ದೆಯ ಕೆಸರಿನಲ್ಲಿ ಕವುಚಿ ಬಿದ್ದಿರುವುದು ಕಂಡು ಬಂದಿದೆ. ಮೃತ ಚಂದ್ರಯ್ಯ ಆಚಾರಿ ಗದ್ದೆಯ ಬದಿಯಲ್ಲಿದ್ದ ಹುಲ್ಲು ಸವರಿ ವಾಪಸು ಮನೆಗೆ ಗದ್ದೆಯ ಓಣಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಮೇಲೆ ಏಳಲು ಆಗದೇ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ವಸಂತಿ ನೀಡಿದ ದೂರಿನಂತೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.