ಮಂಗಳೂರು: ಮಾ.4 ರಿಂದ 'ಸಾಂಸ್ಕೃತಿಕ ರಂಗ ಸುಗ್ಗಿ'
ಮಂಗಳೂರು: ರಂಗ ಸ್ಪಂದನ ವತಿಯಿಂದ ಮಾ. 4 ರಿಂದ 6ರ ತನಕ ಪುರಭವನದಲ್ಲಿ ಸಾಮರಸ್ಯಕ್ಕಾಗಿ ಪಂಚರಂಗೋತ್ಸವ 'ಸಾಂಸ್ಕೃತಿಕ ರಂಗ ಸುಗ್ಗಿ' ಕಾರ್ಯಕ್ರಮ ನಡೆಯಲಿದೆ.
ಸೃಜನಶೀಲತೆಯ ಸವಾಲುಗಳನ್ನು ಸ್ವೀಕರಿಸಿ ವ್ಯಕ್ತಿಯ ಪ್ರತಿಭೆಯ ಆಯಾಮಗಳನ್ನು ತೆರೆದುಕೊಳ್ಳಲು ರಂಗಕಲೆ ವಿಫುಲ ಅವಕಾಶ ನೀಡುತ್ತದೆ. ಕಾರ್ಯಕ್ರಮವನ್ನು ಚಲನಚಿತ್ರ ನಿರ್ಮಾಪಕ ಡಾ.ಪಿ. ಸಂಜೀವ ದಂಡಕೇರಿ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಳಾ ವೆಂ. ನಾಯ್ಡು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮದಿಮೆ ತುಳು ಚಿತ್ರದ ನಿರ್ಮಾಪಕ ಮಾಲಾಡಿ ಬಾಲಕೃಷ್ಣ ಶೆಟ್ಟಿ ಪಾಲ್ಗೊಳ್ಳುವರು ಎಂದು ರಂಗ ಸ್ಪಂದನ ಸಂಚಾಲಕ ವಿ.ಜಿ. ಪಾಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
4 ರಂದು ಮುರಳೀಧರ ಕಾಮತ್ ನಿರ್ದೇಶನದ ರಾಗಧ್ವನಿ ತಂಡದ ಸುಗಮ ಸಂಗೀತ, 5 ರಂದು ಹೆಜ್ಜೆನಾದ ಬಳಗದ ಜ್ಞಾನ ಐತಾಳ್ ತಂಡದಿಂದ ಚಿನ್ನರ ಚಿಲಿಪಿಲಿ, 6ರಂದು ಮಂಜೂಷ ಮಂಗಳೂರು ಪ್ರಸ್ತುತಪಡಿಸುವ ಶ್ರೀ ಕೃಷ್ಣ ಪಾರಿಜಾತ-ನರಕಾಸುರ ಮೋಕ್ಷ ಯಕ್ಷಗಾನ ಪ್ರದರ್ಶನ ನೀಡುವರು ಎಂದರು.
ಗೋಷ್ಠಿಯಲ್ಲಿ ರಾಗಧ್ವನಿ ಸಂಚಾಲಕ ಮುರಳೀಧರ್ ಕಾಮತ್, ಸಾಹಿತಿ ಯಶವಂತ್ ಬೋಳೂರು ಇದ್ದರು.