ಸಾರಾಯಿ ತಯಾರಿ: ಐವರು ಆರೋಪಿಗಳ ಸೆರೆ
ಪುತ್ತೂರು: ಗೇರು ತೋಪಿನಲ್ಲಿ ಗೇರು ಹಣ್ಣು ಬಳಸಿಕೊಂಡು ಅಕ್ರಮವಾಗಿ ಸಾರಾಯಿ ತಯಾರಿಸುತ್ತಿದ್ದ ಸ್ಥಳಕ್ಕೆ ಸೋಮವಾರ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ ರು. 25 ಸಾವಿರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ತಾಲೂಕಿನ ಕೊಡಿಪ್ಪಾಡಿ ಗ್ರಾಮದ ಪಡ್ಪು ಎಂಬಲ್ಲಿ ಗೇರು ತೋಪಿಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ಸಾರಾಯಿ ತಯಾರಿಸುತ್ತಿದ್ದ ಪಡ್ಪು ಪರಿಸರದ ವೆಂಕಪ್ಪ ನಾಯ್ಕ, ಕೃಷ್ಣಪ್ಪ, ಜಯರಾಮ ಪೂಜಾರಿ, ಜನಾರ್ದನ ಮತ್ತು ರೋಬರ್ಟ್ ಎಂಬವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಆನಂದ ಪೂಜಾರಿ ಎಂಬಾತ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಪಡ್ಪುವಿನಲ್ಲಿರುವ ಸರ್ಕಾರಿ ಗೇರು ತೋಪನ್ನು ಪ್ರಮುಖ ಆರೋಪಿ ಆನಂದ ಪೂಜಾರಿ ಎಂಬಾತ ಗುತ್ತಿಗೆ ಆಧಾರದಲ್ಲಿ ಪಡೆದುಕೊಂಡಿದ್ದು, ಉಳಿದ ಆರೋಪಿಗಳು ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.