ಹೊಳೆಗೆ ಬಿದ್ದು ವ್ಯಕ್ತಿ ಸಾವು
ಶಂಕರನಾರಾಯಣ: ಇಲ್ಲಿನ ಕುಳುಂಜೆ ಗ್ರಾಮದ ಅಳ್ಜೆಡ್ಡು ಎಂಬಲ್ಲಿ ವ್ಯಕ್ತಿಯೊಬ್ಬರು ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತರು ಶಂಕರ ನಾಯ್ಕ(50), ಅವರು ತಮ್ಮ ಮಗ ಪ್ರದೀಪ್ ನಾಯ್ಕ ಅವರೊಂದಿಗೆ ಭಾನುವಾರ ಮೇಯಲು ಬಿಟ್ಟ ದನಕರುಗಳನ್ನು ಮನೆಗೆ ತರಲು ಅವರ ತೋಟದ ಬಳಿ ಇರುವ ವಾರಾಹಿ ಹೊಳೆಯ ಬದಿಗೆ ಹೋಗಿದ್ದರು. ಆಗ ಹೊಳೆ ಬದಿ ಇರುವ ದನಕರುಗಳನ್ನು ಎಬ್ಬಿಕೊಂಡು ಬರುವಾಗ ಶಂಕರ ನಾಯ್ಕ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದರು. ಅವರ ಶವ ಸೋಮವಾರ ಮುಳುಗಿದ ಸ್ಥಳದ ಬಳಿಯೇ ಸಿಕ್ಕಿದೆ. ಈ ಬಗ್ಗೆ ಪ್ರದೀಪ್ ನಾಯ್ಕ ನೀಡಿದ ದೂರಿನಂತೆ ಶಂಕರನಾರಾಯಣ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.
ಮನೆಯಿಂದ ಕಳವು
ಕಾಪು: ಇಲ್ಲಿನ ಮೂಡಬೆಟ್ಟು ಗ್ರಾಮದ ಮನೆಯೊಂದರಿಂದ ಲಕ್ಷಾಂತರ ರು. ಬೆಲೆ ಬಾಳುವ ನಗ ನಗದು ಕಳವು ಮಾಡಲಾದ ಘಟನೆ ಭಾನುವಾರ ರಾತ್ರಿ ಸಂಜೆ ನಡೆದಿದೆ. ಇಲ್ಲಿನ ಬಿಜಂಟ್ಲ ಎಂಬಲ್ಲಿನ ನಿವಾಸಿ ಡಾ. ಪಿ. ರವೀಂದ್ರನಾಥ ಶೆಟ್ಟಿ ಅವರ ಮನೆಯಲ್ಲಿ ರಾತ್ರಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಪ್ರವೇಶದ ಬಾಗಿಲನ್ನು ಯಾವುದೋ ಬಲವಾದ ಆಯುಧದಿಂದ ಮೀಟಿ ದಾರಂದ ಚಿಲಕದ ಭಾಗವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಮನೆಯ ಒಳಗೆ ಇದ್ದ ಸುಮಾರು 25 ಪವನ್ ತೂಕದ ಬಂಗಾರದ ಆಭರಣಗಳನ್ನು ವಜ್ರದ ನೆಕ್ಲೆಸ್, ವಜ್ರದ 2 ಬಳೆಗಳನ್ನು ಮತ್ತು ನಗದನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ಸುಮಾರು ರು. 8.50 ಲಕ್ಷ ಮತ್ತು ನಗದು ರು. 81 ಸಾವಿರ ಎಂದು ಡಾ.ಪಿ. ರವೀಂದ್ರನಾಥ ಶೆಟ್ಟಿ ಇವರ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀರಲ್ಲಿ ಮುಳುಗಿ ವ್ಯಕ್ತಿ ಸಾವು
ಸುಬ್ರಹ್ಮಣ್ಯ: ಕುಮಾರಧಾರಾ ಸ್ನಾನ ಘಟ್ಟದಲ್ಲಿ ನದಿಗೆ ಇಳಿದಿದ್ದ ವ್ಯಕ್ತಿಯೊಬ್ಬ ಕಾಲು ಜಾರಿ ಬಿದ್ದು ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ಸುಬ್ರಹ್ಮಣ್ಯದ ವಾಲಾಗದ ಕೇರಿಯ ದಿ. ಚಂರ್ಬನ ಮಗ ರಮೇಶ್ (36) ಮೃತರು. ಕೂಲಿ ಕಾರ್ಮಿಕನಾಗಿರುವ ರಮೇಶ್‌ನ ಶವ ಕುಮಾರಧಾರಾ ಸ್ನಾನ ಘಟ್ಟದ ಬಳಿ ಪತ್ತೆಯಾಗಿದೆ. ಮೊಣಕಾಲಿನಷ್ಟು ನೀರಿರುವ ಸ್ಥಳದಲ್ಲಿ ರಮೇಶ್ ಸತ್ತ ಬಗ್ಗೆ ಸಂಶಯವಿದೆ. ಶವದ ಎಡ ಹೆಬ್ಬೆರಳಲ್ಲಿ ಗಾಯದ ಗುರುತು ಹಾಗೂ ಬೆನ್ನಿನಲ್ಲಿ ಪರಚಿದ ಕುರುಹುಗಳಿದ್ದು ಸಾವು ಸಂಶಯಾಸ್ಪದವಾಗಿದೆ ಎಂದು ಮೃತನ ಸಹೋದರ ರವಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ಸುಬ್ರಹ್ಮಣ್ಯ ಪೊಲೀಸರು ಕೇಸು ದಾಖಲಿಸಿದ್ದಾರೆ. ಸುಬ್ರಹ್ಮಣ್ಯ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯದುರಾಜ್ ಶವ ಮಹಜರು ನಡೆಸಿದ್ದಾರೆ. ಉಪ ಠಾಣಾಧಿಕಾರಿ ಕುಶಾಲಪ್ಪ ಗೌಡ ಕಲ್ಲುಗುಡ್ಡೆ ತನಿಖೆ ಮುಂದುವರಿಸಿದ್ದಾರೆ. ಮೃತ ರಮೇಶ್‌ಗೆ ಪತ್ನಿ, ಇಬ್ಬರು ಮಕ್ಕಳು ಹಾಗೂ ಇಬ್ಬರು ಸಹೋದರರು, ಓರ್ವ ಸಹೋದರಿ ಇದ್ದಾರೆ.