ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಮೇಲೆ ಮಾರಣಾಂತಿಕ ಹಲ್ಲೆ
ವಿಟ್ಲ: ಕೇಪು ಬಿಜೆಪಿ ಕ್ಷೇತ್ರ ಸಮಿತಿ ಅಧ್ಯಕ್ಷ ಗೋಪಾಲ ಪಾಟಾಳಿ (50) ಅವರಿಗೆ ಅಡ್ಯನಡ್ಕದಲ್ಲಿ ತಲವಾರಿನಿಂದ ಕಡಿದು ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ರಾತ್ರಿ ಸುಮಾರು 10 ಗಂಟೆ ಸಮಯದಲ್ಲಿ ವ್ಯಕ್ತಿಯೊಬ್ಬ ಪಾಟಾಳಿ ಅವರಿಗೆ ತಲವಾರಿನಿಂದ ಹಲ್ಲೆ ನಡೆಸಿದ್ದು, ತಲೆಗೆ ತೀವ್ರವಾಗಿ ಗಾಯಗೊಂಡ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳೆಯ ದ್ವೇಷವೇ ಹಲ್ಲೆಗೆ ಕಾರಣ ಎಂದು ತಿಳಿದು ಬಂದಿದೆ.
ಅಪಘಾತ: ಮೂವರಿಗೆ ಗಾಯ
ಉಪ್ಪಿನಂಗಡಿ: ಇಲ್ಲಿನ ಸಮೀಪದ 34ನೇ ನೆಕ್ಕಿಲಾಡಿಯ ಬೊಳ್ಳಾರ್ ಎಂಬಲ್ಲಿ ಕಾರೊಂದು ಈಚರ್ ಗಾಡಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಮಂಗಳೂರಿನ ಶರವು ನಿವಾಸಿಯಾದ ಕುಟುಂಬವೊಂದರ ಸದಸ್ಯರು ಕೂಡ್ಲಿಪೇಟೆಯಲ್ಲಿನ ತನ್ನ ಅನಾರೋಗ್ಯ ಪೀಡಿತ ಸಂಬಂಧಿಕರನ್ನು ಭೇಟಿ ಮಾಡಲೆಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ಕಾರಿನಲ್ಲಿದ್ದ ಅಬೂಬಕ್ಕರ್, ಆಸ್ಯಮ್ಮ, ಮಮ್ತಾಜ್ ಎಂಬ ಮೂವರು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ. ಬಸ್ಸೊಂದನ್ನು ಹಿಂದಿಕ್ಕುವ ಭರದಲ್ಲಿ ಕಾರು ಎದುರುಗಡೆಯಿಂದ ಬಂದ ಈಚರ್ ಲಾರಿಗೆ ಡಿಕ್ಕಿ ಹೊಡೆಯಿತು. ಪುತ್ತೂರು ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.