ಬ್ಯಾನರ್‌ಗೆ ಆಕ್ಷೇಪ: ಪ್ರತಿಭಟನೆ
ಉಪ್ಪಿನಂಗಡಿ: ಇಲ್ಲಿನ 34ನೇ ನೆಕ್ಕಿಲಾಡಿ ಎಂಬಲ್ಲಿನ ಶಿವಾಜಿ ನಗರದ ಶಿವಾಜಿ ಫ್ರೆಂಡ್ಸ್ ಸಂಘಟನೆ ಹಾಕಿದ ಬ್ಯಾನರ್‌ಗೆ ಆಕ್ಷೇಪ ವ್ಯಕ್ತಪಡಿಸಿ ಸ್ಥಳೀಯ ಯುವಕರು ಗ್ರಾಮ ಪಂಚಾಯಿತಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
34ನೇ ನೆಕ್ಕಿಲಾಡಿಯ ಬೋಳಂತಿಲ ಎಂಬ ಪ್ರದೇಶವನ್ನು ಕಳೆದ ಕೆಲ ವರ್ಷಗಳಿಂದ ಸ್ಥಳೀಯ ಯುವಕರು ಶಿವಾಜಿ ನಗರವೆಂದು ನಾಮಕರಣ ಮಾಡಿ, ಶಿವಾಜಿಯ ಹೆಸರಿನಲ್ಲಿಯೇ ಶಿವಾಜಿ ಫ್ರೆಂಡ್ಸ್ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಶಿವಾಜಿ ಹೆಸರಿನಲ್ಲಿ ಬಸ್ಸು ಪ್ರಯಾಣಿಕರ ತಂಗುದಾಣವನ್ನೂ ನಿರ್ಮಿಸಿದ್ದರು.
ಈ ಬಗ್ಗೆ ಅಂದಿನಿಂದಲೇ ವಿರೋಧಿ ಗುಂಪೊಂದು ಆಕ್ಷೇಪಗಳನ್ನು ವ್ಯಕ್ತ ಪಡಿಸಿದ್ದು, ಶಿವಾಜಿ ಹೆಸರಿನ ಪ್ರಯಾಣಿಕರ ತಂಗು ದಾಣಕ್ಕೆ ಬೆಂಕಿ ಹಚ್ಚಿ, ಕಪ್ಪು ಮಸಿ ಬಳಿದು ಉದ್ವಿಗ್ನತೆಯನ್ನು ಮೂಡಿಸಿದ್ದರು. ಈ ಎಲ್ಲಾ ಪ್ರತಿರೋಧದ ನಡುವೆಯೂ ಪ್ರತಿ ವರ್ಷ ಊರ ಹಬ್ಬ ಹರಿದಿನಗಳಿಗೆ ಶುಭ ಕೋರುವ ಬ್ಯಾನರ್ ಅಳವಡಿಸಿಕೊಂಡು ಬರಲಾಗುತಿತ್ತು. ಕೆಲ ದಿನಗಳ ಹಿಂದೆ ಆದರ್ಶ ನಗರದ ಭಜನಾ ಮಹೋತ್ಸವದಲ್ಲಿ ಇದೇ ಸಂಘಟನೆಯ ಶುಭಕೋರುವ ಬ್ಯಾನರ್ ಅಳವಡಿಸಿದ್ದಕ್ಕೆ ಸ್ಥಳೀಯ ಯುವಕರು ಆಕ್ಷೇಪ ವ್ಯಕ್ತಪಡಿಸಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದರು. ಇದೀಗ ಊರ ಜಾತ್ರೆಗೆ ಶುಭ ಕೋರುವ ಬ್ಯಾನರ್ ಅಳವಡಿಕೆಯಲ್ಲಿ ಶಿವಾಜಿ ನಗರ ಎಂಬ ಉಲ್ಲೇಖವನ್ನು ಆಕ್ಷೇಪಿಸಿದ ಅನ್ಯ ಮತೀಯ ಯುವಕರು , ಬೋಳಂತಿಲ ಪ್ರದೇಶಕ್ಕೆ ಶಿವಾಜಿ ನಗರವೆಂದು ಪಂಚಾಯಿತಿ ನಾಮಕರಣ ಮಾಡದ ಕಾರಣ, ಶಿವಾಜಿ ನಗರವೆಂಬ ನಾಮಕರಣ ಅಕ್ರಮವೆಂದು ವಾದಿಸಿ, ಬ್ಯಾನರ್ ತೆರವುಗೊಳಿಸಲು ಅಗ್ರಹಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಂಚಾಯಿತಿ ಅಧ್ಯಕ್ಷ ಅಸ್ಕರಾಲಿ ಮೆದರಬೆಟ್ಟು ಅವರು, ಬ್ಯಾನರ್ ಅಳವಡಿಸಿದ ಸಂಘಟನೆಯು ಕಾನೂನು ಬದ್ಧವಾಗಿ ಪಂಚಾಯಿತಿ ಪರವಾನಗಿ ಪಡೆದೇ ಬ್ಯಾನರ್ ಅಳವಡಿಸಿದೆ. ಇನ್ನು ಶಿವಾಜಿ ನಗರ ಎಂಬ ಹೆಸರು ಬಳಕೆಯ ಬಗ್ಗೆ ಇರುವ ಗೊಂದಲವನ್ನು ಪೊಲೀಸ್ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ, ತೀರ್ಮಾನಿಸಲಾಗುವುದು. ಅಲ್ಲಿಯವರೆಗೆ ಪ್ರತಿಭಟನೆಯನ್ನು ಹಿಂತೆಗೆಯಿರಿ ಎಂದು ತಿಳಿಸಿದರು.