ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಮಂಗಳೂರಿಗೆ ಹಿತಾನುಭವ

Lingaraj Badiger
Updated On : 27 Feb 2013, 11:21 am

 -ಆತ್ಮಭೂಷಣ್
ಮಂಗಳೂರು:
ಬಹುನಿರೀಕ್ಷಿತ ರೇಲ್ವೆ ಬಜೆಟ್‌ನಲ್ಲಿ ಮಂಗಳೂರಿಗೆ ನಾಲ್ಕು ಹೊಸ ಕೊಡುಗೆ ಸಿಕ್ಕಿದರೂ, ಮಂಗಳೂರನ್ನು ಪ್ರತ್ಯೇಕ ಹೊಸ ರೇಲ್ವೆ ವಿಭಾಗ ಎಂದು ಘೋಷಿಸಲು ಈ ಬಾರಿಯೂ ಕೇಂದ್ರ ಸರ್ಕಾರ ಮನಸ್ಸು ಮಾಡಿಲ್ಲ. ಎರಡು ಹೊಸ ಮಾರ್ಗ ರಚನೆ, ಒಂದು ರೈಲು ವಿಸ್ತರಣೆ ಪ್ರಕಟಿಸಿದ್ದು ಹೊರತುಪಡಿಸಿ ಮಂಗಳೂರಿನ ಮಟ್ಟಿಗೆ ರೇಲ್ವೆ ಬಜೆಟ್ ಹಿತಾನುಭವ ಉಂಟುಮಾಡಿದೆ.
 ಬಹಳ ವರ್ಷಗಳ ಬಳಿಕ ಒಂದಷ್ಟು ಕಣ್ಣಿಗೆ ಕಾಣುವ, ರೇಲ್ವೆ ಪ್ರಯಾಣಿಕರ ಮನಸ್ಸಿಗೆ ನೆಮ್ಮದಿ ನೀಡುವ ಬಜೆಟ್ ಕೊಡುಗೆಯನ್ನು ಕೇಂದ್ರ ಪ್ರಕಟಿಸಿ ಕರಾವಳಿಗರು ಸಮಾಧಾನ ಪಟ್ಟುಕೊಳ್ಳುವಂತೆ ಮಾಡಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಹತ್ತಿರದಲ್ಲಿರುವಾಗ ರೇಲ್ವೆ ಕೊಡುಗೆ ಮೂಲಕ ಕರಾವಳಿಗರ ಮನದಲ್ಲಿದ್ದ ಮಲತಾಯಿ ಧೋರಣೆಯನ್ನು ತೊಡೆದುಹಾಕುವ ಪ್ರಯತ್ನ ಮಾಡಿದೆ.
ಯಾರ್ಯಾರಿಗೆ, ಎಷ್ಟೆಷ್ಟು ಪ್ರಯೋಜನ?: 1)ಮಡ್ಗಾಂವ್-ಮಂಗಳೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್-ಇದು ಹೊಸ ಕೊಡುಗೆ. ಉಡುಪಿ, ಕಾರವಾರ ಮುಖೇನ ನಿತ್ಯ ಯಾನ ಕೈಗೊಳ್ಳಲಿದೆ. ಈ ಕೊಂಕಣ ಮಾರ್ಗದಲ್ಲಿ ಈಗ ವರ್ನಾ ಪ್ಯಾಸೆಂಜರ್ ಮಾತ್ರ ಇದ್ದು, ಇನ್ನು ಇಂಟರ್‌ಸಿಟಿ ರೈಲು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ರೇಲ್ವೆ ಸಂಘಟನೆಗಳು ವಾಸ್ಕೊಡಗಾಮ ವರೆಗೆ ಕೇಳಿದ್ದವು.
2) ಮಂಗಳೂರು-ಬೆಂಗಳೂರು ಹೊಸ ರೈಲು-ಇದು ಹೊಸದಾಗಿ ದಕ್ಕಿದ ರೈಲು. ಪ್ರಸ್ತುತ ಪ್ರತಿದಿನ ಯಶವಂತಪುರ-ಕಣ್ಣೂರು-ಕಾರವಾರ ರೈಲು ಅಲ್ಲದೆ ವಾರದಲ್ಲಿ ಮೂರು ಬಾರಿ ಹಗಲು ರೈಲು ಯಶವಂತಪುರ-ಕಾರವಾರ ಮಧ್ಯೆ ಸಂಚರಿಸುತ್ತಿದೆ.
ಈ ಹೊಸ ರೈಲು ಗೂಡ್ಸ್ ರೈಲುಗಳ ಒತ್ತಡ ಕಡಿಮೆ ಇರುವ ಶನಿವಾರ ಅಥವಾ ಭಾನುವಾರ ವಾರಕ್ಕೊಮ್ಮೆ ಸಂಚರಿಸಲಿದೆ. ಬಹುತೇಕ ಇದು ರಾತ್ರಿ ರೈಲು ಆಗಿರುವ ಸಾಧ್ಯತೆ ಇದೆ. ಹಗಲು ರೈಲಿನಲ್ಲಿ ಅಷ್ಟಾಗಿ ಪ್ರಯಾಣಿಕರ ದಟ್ಟಣೆ ಕೊರತೆ ಹಿನ್ನಲೆಯಲ್ಲಿ ಹಗಲು ರೈಲಿನ ನಿತ್ಯ ಓಡಾಟಕ್ಕೆ ರೇಲ್ವೇ ಇಲಾಖೆ ಮುಂದಾಗಿಲ್ಲ ಎನ್ನಲಾಗಿದೆ.
3) ಮಂಗಳೂರು-ಕಾಚಿಗುಡ ಎಕ್ಸ್‌ಪ್ರೆಸ್-ರೇಲ್ವೆ ಸಂಘಟನೆಗಳು ಮಂಗಳೂರು-ವಿಶಾಖಪಟ್ಣ ರೈಲನ್ನು ಕೇಳಿದ್ದರು., ಅದರ ಬದಲು ಕಾಚಿಗುಡಕ್ಕೆ ವಾರಕ್ಕೊಮ್ಮೆ ಸಂಚರಿಸುವ ರೈಲು ಸಿಕ್ಕಿದೆ. ಕೇರಳ, ತಮಿಳ್ನಾಡು, ಆಂಧ್ರ ಪ್ರಯಾಣಿಕರಿಗೆ ಅನುಕೂಲ, ಜತೆಗೆ ತಿರುಪತಿಗೆ ತೆರಳುವವರಿಗೆ ಪ್ರಯೋಜನ.
4) ಭಟ್ಕಳ-ತೋಕೂರು ಡೆಮೊ-ಇದು ಕೂಡ ಮಂಗಳೂರಿಗೆ ರೇಲ್ವೆ ಕೊಡುಗೆ. ಮಂಗಳೂರು-ಉಡುಪಿ-ಭಟ್ಕಳ ಹಾಗೂ ಮಂಗಳೂರು-ಪುತ್ತೂರಿಗೆ ಡೆಮೊ ರೈಲು ಕೇಳಿದ್ದಕ್ಕೆ ಕೇಂದ್ರ ನೀಡಿದ್ದು ಭಟ್ಕಳ-ತೋಕೂರುವರೆಗೆ ಡೆಮೊ ಸಂಚಾರ. ಡೆಮೊ ಅಂದರೆ (ಡೀಸೆಲ್ ಎಲೆಕ್ಟ್ರಿಕಲ್ ಮಲ್ಟಿಪುಲ್ ಯುನಿಟ್)ಡೀಸೆಲ್ ಚಾಲಿತ ರೈಲು ಸಂಚಾರ. ಮುಂಬೈನಲ್ಲಿ ಇಂಥ ಲೋಕಲ್ ರೈಲು ಸಂಚಾರವಿದೆ. ಈ ರೈಲಿಗೆ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ. ನಾಲ್ಕರಿಂದ ಐದು ಕೋಚ್‌ಗಳ ಈ ರೈಲಿಗೆ ಎಂಜಿನ್ ತಿರುಗಿಸುವ ಅವಶ್ಯಕತೆ ಇರುವುದಿಲ್ಲ. ಎರಡೂ ತುದಿಗಳಲ್ಲಿ ಎಂಜಿನ್ ಇರುವುದರಿಂದ ಸಮಯ ಉಳಿತಾಯ, ಪ್ರಯಾಣಿಕರಿಗೂ ಸಹಾಯ.
ಈ ರೈಲು ಪಣಂಬೂರು(ತೋಕೂರು)ವರೆಗೆ ಬರಲಿದೆ. ಇದನ್ನು ಮಂಗಳೂರು ಸೆಂಟ್ರಲ್‌ವರೆಗೆ ವಿಸ್ತರಿಸಬೇಕು ಎಂಬುದು ರೇಲ್ವೆ ಸಂಘಟನೆಗಳ ಒತ್ತಾಯ. ತೋಕೂರು ವರೆಗೆ ಬರುವುದರಿಂದ ಸುರತ್ಕಲ್ ವರೆಗಿನ ಪ್ರಯಾಣಿಕರಿಗೆ ಉಪಯುಕ್ತ. ಇದರಿಂದಾಗಿ ಭಟ್ಕಳ-ಮಂಗಳೂರು ಮಧ್ಯೆಯ ಬಸ್ ಸಂಚಾರಕ್ಕೆ ಪೈಪೋಟಿ ನೀಡಲಿದೆ ಎನ್ನುತ್ತಾರೆ ರೇಲ್ವೆ ಸಂಘಟನೆಗಳ ಸಲಹೆಗಾರ ಪುತ್ತೂರಿನ ಡಿ.ಕೆ.ಭಟ್.
ಕೊಂಕಣದಲ್ಲಿ ಸರಕಿಗೆ ಪ್ರತ್ಯೇಕ ಮಾರ್ಗ?: ಕೊಂಕಣ ರೇಲ್ವೆ ಮಾರ್ಗದಲ್ಲಿ ಸರಕು ಸಾಗಾಟಕ್ಕೆ ಪ್ರತ್ಯೇಕ ಮಾರ್ಗ ರಚನೆಗೆ ರೇಲ್ವೆ ಇಲಾಖೆ ಮುಂದಾಗಿದೆಯೇ?
ಬಜೆಟ್‌ನಲ್ಲಿ ಇದನ್ನು ಸ್ಪಷ್ಟವಾಗಿ ಹೇಳದಿದ್ದರೂ, ಮಂಗಳೂರು-ಮಡ್ಗಾಂವ್ ಮಧ್ಯೆ ಹೊಸ ರೈಲು ಮಾರ್ಗ ಪ್ರಸ್ತಾಪ ಈ ಸಾಧ್ಯತೆಯನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಈ ಮಾರ್ಗದಲ್ಲಿ ಸಿಂಗಲ್ ಹಳಿ ಇದ್ದು, ರೋರೋ ಸಾಗಾಟ ಕೂಡ ಇದರಲ್ಲೇ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಪರ್ಯಾಯ ಮಾರ್ಗಕ್ಕೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎನ್ನುತ್ತವೆ ರೇಲ್ವೆ ಸಂಘಟನೆಗಳು.
ತ್ರಿಮಾರ್ಗ ಸಾಧುವೇ?: ಶೋರ್ನೂರ್-ಮಂಗಳೂರು ನಡುವೆ ತ್ರಿಮಾರ್ಗವನ್ನು ಘೋಷಿಸಲಾಗಿದೆ. ಈಗಾಗಲೇ ಇಲ್ಲಿ ದ್ವಿಹಳಿ ಇರುವುದರಿಂದ ಮತ್ತೆ ತ್ರಿಮಾರ್ಗದ ಉದ್ದೇಶ ಬಜೆಟ್‌ನಲ್ಲಿ ಸ್ಪಷ್ಟವಾಗಿಲ್ಲ. ಅಲ್ಲದೆ ಹಾಲಿ ಮಾರ್ಗದಲ್ಲಿ ಹೈಸ್ಪೀಡ್ ರೈಲು ಓಡಿಸುವ ಬಗ್ಗೆ ಕಾರ್ಯಸಾಧ್ಯತಾ ವರದಿ ಸಿದ್ಧತೆಯಲ್ಲಿದೆ. ತ್ರಿವೆಂಡ್ರಂನಿಂದ ಕಾಸರಗೋಡು, ಕಾಸರಗೋಡು-ಉಡುಪಿವರೆಗೆ ಇದರ ಯೋಜನೆ. ಇದಿನ್ನೂ ಸ್ಪಷ್ಟರೂಪ ಪಡೆದಿಲ್ಲ.
 ಇದಲ್ಲದೆ ಎರಡು ವರ್ಷ ಹಿಂದೆ ಬಜೆಟ್‌ನಲ್ಲಿ ಪ್ರಕಟಿಸಿದ ಹಳಿ ವಿದ್ಯುದೀಕರಣ ಯೋಜನೆ ಶೋರ್ನೂರ್-ಕ್ಯಾಲಿಕಟ್‌ವರೆಗೆ ಅಂತಿಮ ಹಂತದಲ್ಲಿದೆ. ಕ್ಯಾಲಿಕಟ್-ಕಣ್ಣೂರು-ಮಂಗಳೂರು ಯೋಜನೆ ಬಾಕಿ. ಹೀಗಿರುವಾಗ ಯಾವ ಉದ್ದೇಶದಲ್ಲಿ ತ್ರಿಮಾರ್ಗ ಘೋಷಿಸಲಾಗಿದೆ ಎಂಬುದು ಇನ್ನಷ್ಟೆ ಗೊತ್ತಾಗಬೇಕು ಎನ್ನುತ್ತಾರೆ ಡಿ.ಕೆ.ಭಟ್.
ವಿಸ್ತರಣೆ ತಮಿಳ್ನಾಡಿಗೆ ಅನುಕೂಲ: ಮಂಗಳೂರು-ತಿರುಚನಾಪಳ್ಳಿ ರೈಲನ್ನು ಪಾಂಡಿಚೇರಿಗೆ ವಿಸ್ತರಿಸಲಾಗಿದೆ. ಇದು ಕೇರಳ, ತಮಿಳ್ನಾಡಿನವರಿಗೆ ಲಾಭ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement