108 ಆಂಬುಲೆನ್ಸ್ ಶಿರಾಡಿಗೆ ವರ್ಗಾವಣೆ; ಜನರ ವಿರೋಧ
ಬೆಳ್ತಂಗಡಿ: ವೇಣೂರು ಸರ್ಕಾರಿ ಆಸ್ಪತ್ರೆಯಲ್ಲಿದ್ದ 108 ಆಂಬುಲೆನ್ಸ್ನ್ನು ದಿಢೀರನೆ ಬೇರೆಡೆ ವರ್ಗಾಯಿಸುತ್ತಿದ್ದಾರೆಂದು ತಿಳಿದ ವೇಣೂರಿನ ನಾಗರಿಕರು ಪ್ರತಿಭಟನೆ ನಡೆಸಿದ ವಿದ್ಯಮಾನ ಸೋಮವಾರ ನಡೆಯಿತು. ಕಳೆದ ಕೆಲವು ವರ್ಷಗಳಿಂದ 108 ವಾಹನವು ವೇಣೂರು ಆಸ್ಪತ್ರೆಗಾಗಿಯೇ ಮಂಜೂರಾಗಿತ್ತು. ಆಸುಪಾಸಿನವರಿಗೆ ಅನುಕೂಲಕರವಾಗಿತ್ತು. ಆದರೆ ಸೋಮವಾರ ಏಕಾಏಕಿ ಈ ವಾಹನವನ್ನು ಶಿರಾಡಿಗೆ ವರ್ಗಾಯಿಸುವ ನಿರ್ಧಾರವನ್ನು ಸುಪರಿಟೆಂಡೆಟ್ ಕೈಗೊಂಡರು. ಇದನ್ನು ಹೇಗೋ ಅರಿತ ಸುತ್ತಲಿನ ನಾಗರಿಕರು ಅದು ಹೋಗುವುದನ್ನು ತಡೆಹಿಡಿಯುವಲ್ಲಿ ಸಫಲರಾದರು. ಕೇವಲ ಎರಡು ಮೂರು ದಿನಕ್ಕೆ ಮಾತ್ರ ಅದನ್ನು ವರ್ಗಾಯಿಸಲಾಗುತ್ತದೆಂದು ಅಧಿಕಾರಿಗಳು ದೂರವಾಣಿ ಮೂಲಕ ತಿಳಿಸಿದರು. ಆದರೆ ಈ ರೀತಿ ಮಾಡಿದರೆ ಖಾಯಂ ಆಗಿಯೇ ಅಲ್ಲುಳಿಯಬಹುದು ಎಂದರಿತ ನಾಗರಿಕರು ಇನ್ನಷ್ಟು ಜನರನ್ನು ಸೇರಿಸಿ ವಾಹನದ ಮುಂದೆ ಧರಣಿ ಕುಳಿತರು. ಎಲ್ಲಾ ರಾಜಕೀಯ ಪಕ್ಷದವರೂ ಪ್ರತಿಭಟನೆಯಲ್ಲಿ ಭಾಗಿಯಾದರು.ಪ್ರತಿಭಟನೆಯ ಕಾವು ಏರುತ್ತಿದ್ದಂತೆ ವೇಣೂರು ಪೋಲಿಸರು ಆಗಮಿಸಿದರು. ಪರಿಸ್ಥಿತಿ ತಹಬದಿಗೆ ತಂದರು. ಸದ್ಯ 108 ಆಂಬುಲೆನ್ಸ್ ವೇಣೂರಿನಲ್ಲಿಯೇ ಇರುವುದೆಂದು ನಿರ್ಧರಿಸಲಾಗಿದೆ. ಈ ವಾಹನವನ್ನು ವೇಣೂರಿಗೆ ಮಂಜೂರು ಮಾಡಲು ಹರಸಾಹಸ ಮಾಡಿದ್ದೇವೆ. ಅದರ ಕಷ್ಟ ನಮಗೇ ಗೊತ್ತು. ಇದೀಗ ಏಕಾಏಕಿ ವರ್ಗಾಯಿಸುವುದು ಎಳ್ಳಷ್ಟೂ ಸರಿಯಲ್ಲ ಎಂದು ತಾ.ಪಂ.ಸ್ಥಾಯಿ ಸಮಿತಿ ಸದಸ್ಯ ವಿಜಯಗೌಡ ಪ್ರತಿಕ್ರಿಯಿಸಿದ್ದಾರೆ.