ಇಂದಿನಿಂದ ದಂತವೈದ್ಯಕೀಯ ಸಮ್ಮೇಳನ
ಮಂಗಳೂರು: ಎ.ಬಿ.ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಕಾಲೇಜಿನ ಆಶ್ರಯದಲ್ಲಿ 17ನೇ ಭಾರತೀಯ ದಂತವೈದ್ಯಕೀಯ ಸಂಘದ ಸ್ನಾತಕೋತ್ತರ ಪದವೀಧರ ವಿದ್ಯಾರ್ಥಿ ಸಮ್ಮೇಳನ ಫೆ.28ರಿಂದ ಮಾ.3ರ ವರೆಗೆ ನಗರದ ಡಾ.ಟಿ.ಎಂ.ಎ.ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನಾ ಸಮಿತಿ ಅಧ್ಯಕ್ಷ ಡಾ.ಯು.ಎಸ್.ಕೃಷ್ಣ ನಾಯಕ್, ಮಾ.1ರಂದು ಸಂಜೆ 6ಕ್ಕೆ ನಿಟ್ಟೆ ವಿವಿ ಕುಲಪತಿ ವಿನಯ ಹೆಗ್ಡೆ ಉದ್ಘಾಟಿಸಲಿದ್ದು, ಉಪಕುಲಪತಿ ಪ್ರೊ.ಡಾ.ರಮಾನಂದ ಶೆಟ್ಟಿ ಪಾಲ್ಗೊಳ್ಳುವರು. ಭಾರತೀಯ ದಂತವೈದ್ಯರ ಸಂಘ ಅಧ್ಯಕ್ಷ ಪ್ರೊ.ಡಾ.ವಿ.ಎಸ್.ಕೋಹ್ಲಿ ಅಧ್ಯಕ್ಷತೆ ವಹಿಸುವರು ಎಂದರು. ಸ್ನಾತಕೋತ್ತರ ಪದವೀಧರರ ಬೆಳ್ಳಿ ಹಬ್ಬ ಕೂಡ ನಡೆಯಲಿದೆ. 4 ದಿನಗಳ ಕಾರ್ಯಕ್ರಮದಲ್ಲಿ 50 ಅತಿಥಿ ಉಪನ್ಯಾಸಕರು ಭಾಗವಹಿಸಲಿದ್ದು, 200 ಮಂದಿ ವಿದ್ಯಾರ್ಥಿಗಳು ಪ್ರಬಂಧ ಮಂಡಿಸುವರು. 400 ಪೋಸ್ಟರ್ ಮಂಡಿಸುವರು. ಇದೇ ವೇಳೆ ರಾಷ್ಟ್ರ ಮಟ್ಟದ ಕ್ವಿಜ್ ಸ್ಪರ್ಧೆ, ವ್ಯಾಪಾರ ಪ್ರದರ್ಶನ ಏರ್ಪಡಲಿದ್ದು, ಸುಮಾರು 1,500 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.