ಉಪ್ಪಿನಂಗಡಿ: ಮರದ ಬೃಹತ್ ಗೆಲ್ಲು ಧರಾಶಾಹಿ, ತಪ್ಪಿದ ದುರಂತ
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿದ್ದ ಅಶ್ವತ್ಥ ಮರದ ಬೃಹತ್ ಗೆಲ್ಲೊಂದು ದಾರಾಶಾಹಿಯಾಗಿ ಭಾರಿ ಅನಾಹುತವೊಂದು ಪವಾಡ ಸದೃಶ್ಯದ ನೆಲೆಯಲ್ಲಿ ತಪ್ಪಿದೆ. ಜಾತ್ರೋತ್ಸವ ಸಂಭ್ರಮದಲ್ಲಿರುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾದಲ್ಲಿರುವ ಅಶ್ವತ್ಥ ಮರದ ಬೃಹತ್ ಗೆಲ್ಲು ಯಾವುದೇ ಹಾನಿಯುಂಟು ಮಾಡದೇ ಬಿದ್ದಿದೆ. ಬಿದ್ದ ಮರವು ಬೀಳುವ ಸಮಯದಲ್ಲಿ ಸ್ವಲ್ಪ ಬದಲಾವಣೆಯಾಗಿದ್ದರೆ ದೇವಾಲಯದಲ್ಲಿ ಉತ್ತರ ಕ್ರಿಯಾ ಕಾರ್ಯಕ್ರಮಕ್ಕೆಂದು ಬಂದ ಹಲವರ ವಾಹನಗಳಿಗೆ ಹಾನಿಯಾಗುತಿತ್ತು. ಯಾಕೆಂದರೆ ಅದೇ ಸ್ಥಳದಲ್ಲಿ ಬಹುತೇಕ ವಾಹನಗಳು ಪಾರ್ಕಿಂಗ್ ಆಗಿತ್ತು. ಗೆಲ್ಲು ಬಿದ್ದ ಸ್ಥಳದ ಸನಿಹದಲ್ಲೇ ಜಾತ್ರೆ ಉತ್ಸವಕ್ಕೆಂದು ಹಾಕಲಾಗಿದ್ದ ಅಂಗಡಿಗಳು ಇದ್ದು, ಘಟನೆಯಿಂದ ಯಾವುದೇ ಹಾನಿಯಾಗಿಲ್ಲ. ಒಟ್ಟಾರೆ ಗೆಲ್ಲು ಬಿದ್ದ ಸಮಯ ಮತ್ತು ಸ್ಥಳ ಯಾವುದೇ ಹಾನಿಯನ್ನುಂಟು ಮಾಡದೇ ಇದ್ದಿದ್ದು ದೇವರ ಕೃಪೆ ಎಂಬುದನ್ನು ಸಾದರಪಡಿಸಿದಂತಿತ್ತು. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಆಕಸ್ಮಿಕವಾಗಿ ಘಟಿಸಿದ ಈ ಘಟನೆಯಿಂದ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸದಾ ಭಕ್ತರಿಂದ ತುಂಬಿರುತ್ತಿದ್ದ ಈ ಸ್ಥಳದಿಂದ ಭಕ್ತರು ನಿರ್ಗಮಿಸಿದ ಬಳಿಕವೇ ಮರದ ಗೆಲ್ಲು ಬಿದ್ದಿರುವುದು ಹಾಗೂ ಸನಿಹದ ಜಾತ್ರಾ ಅಂಗಡಿಗಳಿಗೆ ಹಾನಿಯನ್ನುಂಟು ಮಾಡದಿರುವುದು ಕ್ಷೇತ್ರದ ಶ್ರೀ ಸಹಸ್ರಲಿಂಗೇಶ್ವರನ ಕೃಪೆಯೇ ಕಾರಣವಾಗಿದೆ. ವರ್ಷಾವಧಿ ಉತ್ಸವದ ಉತ್ಸಾಹದಲ್ಲಿರುವ ದೇವಾಲಯದಲ್ಲಿ ಪವಾಡವೆಂಬಂತೆ ಯಾವುದೇ ಹಾನಿಯುಂಟಾಗದೇ ಮರದ ಬೃಹತ್ ಗೆಲ್ಲು ಬಿದ್ದಿರುವುದು ನೆಮ್ಮದಿಗೆ ಕಾರಣವಾಗಿದೆ ಎಂದಿದ್ದಾರೆ.