ಕಾಡಾನೆ ಓಡಿಸಲು ಹೊರಟ ವಿಕ್ರಮ, ಹರ್ಷ
ಸುಬ್ರಹ್ಮಣ್ಯ: ಕೃಷಿಕರನ್ನು ಗಂಭೀರವಾಗಿ ಕಾಡುತ್ತಿರುವ ಮತ್ತು ಕೆಲವೇ ದಿನಗಳ ಅಂತರದಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿರುವ ಕಾಡಾನೆಯನ್ನು ಓಡಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಮಲೆನಾಡಿನ ತಪ್ಪಲಿನ ಪ್ರದೇಶಗಳ ಕಾಡಂಚಿನಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಜೀವನ ನಡೆಸುತ್ತಿರುವ ಕೃಷಿಕರಿಗೆ ಕಾಡು ಪ್ರಾಣಿಗಳ ಉಪಟಳ ಕಳೆದ ಕೆಲವು ಸಮಯಗಳಿಂದ ಗಂಭೀರವಾಗಿ ಕಾಡುತ್ತಿದೆ. ಕಾಡಾನೆಗಳ ಹಿಂಡು ಕೃಷಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುವುದಲ್ಲದೆ ಕೃಷಿ ತೋಟದಲ್ಲಿ ನೀರು ಹಾಯಿಸಲು ಜೋಡಿಸಲ್ಪಟ್ಟ ಪೈಪ್, ಸ್ಪಿಂಕ್ಲರ್, ಹನಿ ನೀರಾವರಿಗಳನ್ನು ಹಾಳುಗೆಡವುತ್ತಿವೆ.
ಕಾಡಾನೆ ದಾಳಿಗೆ ಸುಬ್ರಹ್ಮಣ್ಯ, ಐನೆಕಿದು, ಕೊಲ್ಲಮೊಗ್ರ, ಬಾಳುಗೋಡು, ಮಡಪ್ಪಾಡಿ ಪ್ರದೇಶಗಳು ಪೂರ್ಣವಾಗಿ ನಲುಗಿ ಹೋಗಿದೆ. ಮರ್ಕಂಜ, ಪಂಜ, ಆಲೆಟ್ಟಿ, ಮಂಡೆಕೋಲು, ಸಂಪಾಜೆ, ಪುಳಿಕುಕ್ಕು ಈ ಭಾಗಗಳ ಕೃಷಿಕರು ಕೂಡ ದಾಳಿಗೊಳಗಾಗಿದ್ದಾರೆ. ಮಂಗಳವಾರ ಕೊಲ್ಲಮೊಗ್ರದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಈ ವಿಚಾರವಾಗಿ ಗಂಭೀರ ಚರ್ಚೆ ನಡೆದು ಕಾಡಾನೆ ಓಡಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸಭೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಮಾಹಿತಿ ನೀಡಿ ಕಾಡಾನೆಯನ್ನು ಓಡಿಸಲು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಅದರಂತೆ ಕಾಡಾನೆಗಳನ್ನು ಕಾಡಿನ ಒಳಕ್ಕೆ ಓಡಿಸಲು ಅರಣ್ಯ ಇಲಾಖೆ ಕುಶಾಲನಗರದ ಆನೆಕಾಡಿನ ದುಬಾರೆಯಿಂದ ತರಿಸಿದ ವಿಕ್ರಮ ಮತ್ತು ಹರ್ಷ ಕಲ್ಮಕಾರುವಿನಲ್ಲಿ ಬೀಡುಬಿಟ್ಟಿದೆ. ಅರಣ್ಯ ಇಲಾಖೆಯ ಸಿಬ್ಬಂದಿ, ಗ್ರಾಮಸ್ಥರು ನಾಡಾನೆಯೊಂದಿಗೆ ಕಾಡಿಗೆ ತೆರಳುತ್ತಿದ್ದಾರೆ.
ಮೊಕ್ಕಾಂ: ಮಂಗಳವಾರ ಸಂಜೆ ನಾಡಾನೆಗಳು ಕಾಡಿನತ್ತ ಪ್ರಯಾಣ ಬೆಳೆಸಿ ಕಾಡಾನೆಯನ್ನು ಹುಡುಕುವ ಕಾರ್ಯದಲ್ಲಿ ತೊಡಗಿವೆ. ಆದರೆ, ಕಾಡಾನೆಯ ಸುಳಿವು ದೊರಕಲಿಲ್ಲ. ಮತ್ತೆ ಬುಧವಾರ ಬೆಳಗ್ಗೆ ಅರಣ್ಯ ಸಿಬ್ಬಂದಿ, ಗ್ರಾಮಸ್ಥರು ಆನೆಯೊಂದಿಗೆ ಕಾಡಿನತ್ತ ತೆರಳಿದ್ದಾರೆ. ಅರಣ್ಯಸಂರಕ್ಷಣಾಧಿಕಾರಿ ಡಾ. ದಿನೇಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ, ಮಾರ್ಗದರ್ಶನ ನೀಡುತ್ತಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.