ಡೀಸಿ, ಆಯುಕ್ತರಿಂದ ನಗರ ನೈರ್ಮಲ್ಯ ತಪಾಸಣೆ: ಆರೋಗ್ಯ ನಿರೀಕ್ಷಕ ಅಮಾನತು
ಮಂಗಳೂರು: ಜಿಲ್ಲಾಧಿಕಾರಿ ಎನ್. ಪ್ರಕಾಶ್ ಮತ್ತು ಆಯುಕ್ತ ಡಾ.ಹರೀಶ್ ಕುಮಾರ್ ಏಕಾಏಕಿ ನಗರದ ಎಲ್ಲೆಡೆ ಹಠಾತ್ ಭೇಟಿ ನೀಡಿ ಘನತ್ಯಾಜ್ಯ ವಿಲೇವಾರಿ ಮತ್ತು ನೈರ್ಮಲ್ಯ ವೀಕ್ಷಿಸಿದರು. ಫಳ್ನೀರ್ ರಸ್ತೆ, ಕಂಕನಾಡಿ ಮತ್ತು ವೆಲೆನ್ಸಿಯಾ ಪರಿಸರ ಶುಚಿಯಾಗಿಡದ ಆರೋಗ್ಯ ನಿರೀಕ್ಷರನ್ನು ಅಮಾನತು ಮಾಡಲು ಜಿಲ್ಲಾಧಿಕಾರಿ ಆದೇಶ ನೀಡಿದರು. ಬುಧವಾರ ಬೆಳಗ್ಗೆ 6 ಗಂಟೆಯಿಂದ 9 ರ ವರೆಗೆ ನಿರಂತರ 3 ಗಂಟೆಗಳ ಕಾಲ ಸಮೀಕ್ಷೆ ನಡೆಸಿದರು. ಕಂಕನಾಡಿ, ಫಳ್ನೀರ್ ರಸ್ತೆ, ಶಾಂತಿ ನಿಲಯ ರಸ್ತೆ, ನಂದಿಗುಡ್ಡ, ಪಾಂಡೇಶ್ವರ, ಕೋರ್ಟ್, ಧಕ್ಕೆ, ಸೆಂಟ್ರಲ್ ಮಾರ್ಕೆಟ್, ರಥಬೀದಿ, ಬಂದರು, ಕುದ್ರೋಳಿ, ಮಣ್ಣಗುಡ್ಡೆ, ಉರ್ವ, ಕೊಟ್ಟಾರ, ಬಿಜೈ, ಕದ್ರಿ, ಶಿವಭಾಗ್, ಬೆಂದೂರು ಪ್ರದೇಶಗಳನ್ನು ಪರಿಶೀಲಿಸಿದರು. ಶುಚಿ ಇರುವ ಪ್ರದೇಶಗಳ ಬಗ್ಗೆ ಜಿಲ್ಲಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದರು.