ಮಿನಿ ಲಾರಿ ಆಟೋಗೆ ಡಿಕ್ಕಿ: 7 ಮಂದಿಗೆ ಗಂಭೀರ ಗಾಯ
ವಿಟ್ಲ: ಮಿನಿ ಲಾರಿಯೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸಹಿತ ಏಳು ಜನರು ಗಾಯಗೊಂಡ ಘಟನೆ ವಿಟ್ಲದ ಸಾಲೆತ್ತೂರು ಸಮೀಪ ನಡೆದಿದೆ. ಸಾಲೆತ್ತೂರು ಸಮೀಪದ ಮಂಚಿಯ ಕೋಕಳ ಎಂಬಲ್ಲಿ ಸಜಿಪಕ್ಕೆ ಹೋಗುತ್ತಿದ್ದ ಆಟೋ ರಿಕ್ಷಾಗೆ ಎದುರುಗಡೆಯಿಂದ ಸಾಲೆತ್ತೂರಿಗೆ ಬರುತ್ತಿದ್ದ ಮಿನಿ ಲಾರಿ ಡಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಕರೈ ನಿವಾಸಿಗಳಾದ ಸೆಫಿಯಾ (30), ಮುನಿಸಾ (16), ಮುಫಿಯಾ (12) ಮತ್ತು ಅವರ ಸಂಬಂಧಿಕರಾದ ಪರ್ತಿಪ್ಪಾಡಿಯ ರಸೀನಾ (15), ಝರೀನಾ (13) ಮತ್ತು ಫಾತಿಮತ್ ಕುಬ್ರಾ (11) ಮತ್ತು ಅಟೋ ಚಾಲಕ ಬಾರೆಬೆಟ್ಟು ನಿವಾಸಿ ಸಿದ್ದೀಕ್ ಸಹಿತ ಏಳೂ ಜನರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ಗೆ ಸೈಡ್ ಕೊಡುವ ಸಂದರ್ಭ ಚಾಲಕ ಹತೋಟಿ ಕಳೆದುಕೊಂಡ ಲಾರಿಯು ರಿಕ್ಷಾಕ್ಕೆ ರಭಸವಾಗಿ ಡಿಕ್ಕಿ ಹೊಡೆದುದರಿಂದ ಈ ಅವಘಡ ಸಂಭವಿಸಿದೆ.
ಲಾರಿ- ಬಸ್ ಡಿಕ್ಕಿ: ಚಾಲಕಗೆ ಗಾಯ
ಮೂಲ್ಕಿ: ಲಾರಿ- ಬಸ್ ಡಿಕ್ಕಿಯಾಗಿ ಲಾರಿ ಚಾಲಕ ತೀವ್ರ ಗಾಯಗೊಂಡ ಘಟನೆ ಬುಧವಾರ ಸಂಜೆ ಮೂಲ್ಕಿ ಸಮೀಪದ ಕೊಳ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ಹಾಗೂ ಮಂಗಳೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ಸು ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಲಾರಿಯ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನ ಕಳವು: 3 ವರ್ಷ ಸಜೆ
ಮಂಗಳೂರು: ಅಳಕೆಯ ಚೈತನ್ಯ ಅಪಾರ್ಟ್ಮೆಂಟ್ನ ಅನಂತ ಹೆಗಡೆ ಅವರ ರೂಂನಿಂದ ಚಿನ್ನ ಕಳವು ಮಾಡಿದ್ದ ಕೆಲಸದಾಕೆ ದುರ್ಗಮ್ಮನಿಗೆ ಸಿಜೆಎಂ ನ್ಯಾಯಾಲಯ ಮಂಗಳವಾರ 3 ವರ್ಷದ ಸಜೆ ಮತ್ತು 3 ಸಾವಿರ ದಂಡ ವಿಧಿಸಿದೆ. 2009ನೇ ಮೇ 19 ರಂದು ಮನೆಕೆಲಸದಾಕೆ ದುರ್ಗಮ್ಮ ತನ್ನ ಸ್ನೇಹಿತ ಸಹಾಯದಿಂದ ಬೋಜರಾಜ್ ಲೇನ್ನ ಚೈತನ್ಯ ಅಪಾರ್ಟ್ಮೆಂಟ್ನ ಅನಂತ ಹೆಗಡೆ ಅವರ ಮನೆಯ ಕಪಾಟಿನಲ್ಲಿ ರು. 2.50 ಲಕ್ಷ ಮೌಲ್ಯದ ಸುಮಾರು 25 ಪವನ್ ಚಿನ್ನವನ್ನು ಕಳುವುಗೈದು ಭಟ್ಕಳಕ್ಕೆ ಪರಾರಿಯಾಗಿದ್ದರು. ದೂರುದಾರರ ಪರವಾಗಿ ಸಹಾಯಕ ಸರ್ಕಾರಿ ಅಭಿಯಾಕ ಬಿ. ಶೇಖರ್ ಶೆಟ್ಟಿ ವಾದ ಮಂಡಿಸಿದರು.
ಇಡ್ಯಾ ಸಂದೀಪ್ ಕೊಲೆ:
ಮುಂಬೈನಲ್ಲಿ ಇಬ್ಬರ ಸೆರೆ
ಮಂಗಳೂರು: ಇಡ್ಯಾ ಸಂದೀಪ್ ಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಸಂದೇಶ್ ಕರ್ಕೆರ ಮತ್ತು ಸಚಿನ್ ಬಂಗೇರ ಬಂಧಿತರು. ಮುಂಬಯಿ ಪಶ್ಚಿಮ ಹೆಚ್ಚುವರಿ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಪೊಲೀಸ್ ಅಧಿಕಾರಿ ದಯಾ ನಾಯಕ್ ನೇತೃತ್ವದ ತಂಡ ಬುಧವಾರ ಬಾಂದ್ರ ಗೋಲ್ಡನ್ ಪ್ಲಾಜಾ ಬಳಿ ಆರೋಪಿಗಳನ್ನು ಬಂಧಿಸಿತು. ಫೆ.19ರಂದು ಸಂದೀಪ್ನನ್ನು ಸಹವರ್ತಿಗಳೇ ಇರಿದು ಕೊಲೆ ಮಾಡಿ ಕಡಲಿಗೆ ಎಸೆದಿದ್ದರು. ಶವ ಬೈಕಂಪಾಡಿ ಮೀನಕಳಿಯ ಬಳಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿ ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಮನೋಜ್ ಕುಮಾರ್, ಮೀನಕಳಿಯ ನಿವಾಸಿ ನವೀನ ಯಾನೆ ಮೈಕಲ್ ನವೀಲ, ಬೈಕಂಪಾಡಿಯ ರಾಜು ಯಾನೆ ರಾಘವೇಂದ್ರ, ಇಡ್ಯಾ ನಿವಾಸಿ ಲಕ್ಷ್ಮೀಶ ಯಾನೆ ಅಣ್ಣಿ, ಸುರತ್ಕಲ್ನ ಅಣ್ಣು ಯಾನೆ ಚೇತನ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ ವ್ಯಕ್ತಿ ನಾಪತ್ತೆ
ವಿಟ್ಲ: ಅಸ್ವಸ್ಥಗೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವಿಟ್ಲದ ಹಮೀದ್ ಎಂಬಾತ ನಾಪತ್ತೆಯಾಗಿದ್ದಾನೆ. ಸೋಮವಾರ ಬೆಳಗ್ಗೆ ಅಸ್ವಸ್ಥಗೊಂಡಿದ್ದ ವಿಟ್ಲದ ಮೇಗಿನಪೇಟೆ ನಿವಾಸಿ ಹಮೀದ್ (36)ನನ್ನು ಸ್ಥಳೀಯರು 108 ತುರ್ತು ವಾಹನದಲ್ಲಿ ಕರೆದುಕೊಂಡು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಮಂಗಳವಾರ ಬೆಳಗ್ಗೆ ವೆನ್ಲಾಕ್ ಆಸ್ಪತ್ರೆಯಿಂದ ಹಮೀದ್ ನಾಪತ್ತೆಯಾಗಿದ್ದಾನೆ ಎಂದು ಮನೆಯವರಿಗೆ ಮಾಹಿತಿ ಬಂದಿತ್ತು. ಈ ಬಗ್ಗೆ ಆತನ ಮನೆಯವರು ಎರಡು ದಿನಗಳಿಂದ ಮಂಗಳೂರಿನಲ್ಲಿ ಹುಡುಕಾಡಿದ್ದರೂ ಸುಳಿವು ಸಿಕ್ಕಿಲ್ಲ ಹಾಗೂ ವಿಟ್ಲದಲ್ಲಿನ ಮನೆಗೆ ಕೂಡ ಮರಳಿ ಬಂದಿಲ್ಲ ಎಂದು ತಿಳಿದುಬಂದಿದೆ.
ಕಾರು-ರಿಕ್ಷಾ ಡಿಕ್ಕಿ: 3 ಗಾಯ
ಮಂಗಳೂರು: ನಾಗೊರಿ ಪಟೇಲ್ ಹೌಸ್ ಬಳಿ ವೇಗವಾಗಿ ಬಂದ ಕಾರು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಿಕ್ಷಾದಲ್ಲಿ ಇಬ್ಬರು ಯುವತಿಯರಿದ್ದರು. ಡಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ರಸ್ತೆಯಿಂದ ಕೆಳಗೆ ಹೊಂಡಕ್ಕೆ ಬಿದ್ದಿದೆ. ಅಪಘಾತ ನಡೆಸಿದ ಬಳಿಕವೂ ಕಾರು ನಿಲ್ಲಿಸದೆ ವೇಗವಾಗಿ ಹೋಗತೊಡಗಿತು. ಕೆಲವರು ಕಾರನ್ನು ಹಿಂಬಾಲಿಸಲು ಯತ್ನಿಸಿದಾಗ ಹೆದರಿದ ಕಾರು ಚಾಲಕ ತಪ್ಪಿಸಿಕೊಳ್ಳಲು ಎಂದು ಗರೋಡಿ ಬಳಿ ಒಳರಸ್ತೆ ಪ್ರವೇಶಿಸಿದ. ಆದರೆ ಆ ರಸ್ತೆ ಕೊನೆಗೊಳ್ಳುತ್ತಿದ್ದ ಕಾರಣ ಕಾರನ್ನು ನಿಲ್ಲಿಸಿ ಹೊರಗೆ ಓಡಿ ಪರಾರಿಯಾಗಿದ್ದಾರೆ. ಕಾರೊಳಗೆ ನಾಲ್ವರು ಯುವಕರಿದ್ದರು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು, ವಿದ್ಯಾರ್ಥಿಗಳಾಗಿರಬೇಕು ಎಂದು ಶಂಕಿಸಲಾಗಿದೆ. ರಿಕ್ಷಾ ಕಂಕನಾಡಿ ರೈಲು ನಿಲ್ದಾಣದಿಂದ ನಗರದತ್ತ ಆಗಮಿಸುತ್ತಿತ್ತು. ಇಂಡಿಕಾ ಕಾರು ಬಿ.ಸಿ.ರೋಡ್ನಿಂದ ಮಂಗಳೂರಿನತ್ತ ಆಗಮಿಸುತ್ತಿತ್ತು.
ಮನೆಗೆ ಬೆಂಕಿ: ಅಪಾರ ಹಾನಿ
ಮೂಲ್ಕಿ: ಬಳ್ಕುಂಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಗ್ರಾಮದ ಕೊಗ್ಗಣ್ಣ ಶೇರಿಗಾರ ಎಂಬವರ ಮನೆಗೆ ಮಂಗಳವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ವಸ್ತುಗಳು ಭಸ್ಮವಾಗಿದ್ದು,. ಸುಮಾರು ರು. 50,000 ನಷ್ಟ ಸಂಭವಿಸಿದೆ. ಬಳ್ಕುಂಜೆ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರೊ. ಪುರುಷೋತ್ತಮ
ಬಂಟ್ವಾಳ: ವಿಟ್ಲ ಮೇಗಿನಪೇಟೆ ನಿವಾಸಿ ಪ್ರೊ. ಪುರುಷೋತ್ತಮ (84) ಸೋಮವಾರ ಬೆಳಿಗ್ಗೆ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು. ಮಂಗಳೂರಿನ ತನ್ನ ಮಗನ ಮನೆಯಲ್ಲಿದ್ದ ಅವರು ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ ನಿಧನರಾದರು. ಅವರಿಗೆ ಪತ್ನಿ, 3 ಗಂಡು, ಒಂದು ಹೆಣ್ಣು ಮಗಳು ಇದ್ದಾರೆ.
ವಿಟ್ಲದ ವಿಠಲ ಹೈಸ್ಕೂಲು, ಮಂಗಳೂರಿನ ಮಿಲಾಗ್ರಿಸ್ ಹೈಸ್ಕೂಲಲ್ಲಿ ಶಿಕ್ಷಕರಾಗಿ ದುಡಿದ ಅವರು ಇಂಗ್ಲಿಷ್ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಬಂಟ್ವಾಳ ಎಸ್. ವಿ.ಎಸ್. ಕಾಲೇಜಿನಲ್ಲಿ ಪ್ರವಾಚಕರಾಗಿ, ಪ್ರಭಾರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವಿಟ್ಲ ಯೋಗೀಶ್ವರ ಮಠದ ಜೋಗಿ ಸಮಾಜದ ಅಧ್ಯಕ್ಷರಾಗಿ, ವಿಟ್ಲ ಶ್ರೀ ಪಂಚಲಿಂಗೇಶ್ವರ ಸೇವಾ ಸಮಿತಿಯಲ್ಲಿ ತೊಡಗಿಸಿಕೊಂಡಿದ್ದರು.
ಸರಸ್ವತಿ (78)
ವಿಟ್ಲ: ಕನ್ಯಾನ ಗ್ರಾಮದ ನಂದರಬೆಟ್ಟು ದಿ. ಕೃಷ್ಣದಾಸ ಅವರ ಪತ್ನಿ ಸರಸ್ವತಿ (78) ಅವರು ಹೃದಯಾಘಾತದಿಂದ ಫೆ.23ರಂದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.