ಸುಳ್ಯ ಪ.ಪಂಚಾಯ್ತಿ ಚುನಾವಣೆ: ಆಕ್ಷೇಪಣೆ ತಳ್ಳಿಹಾಕಿದ ಅಧಿಕಾರಿ- ನಾಮಪತ್ರ ಸಿಂಧು
ಸುಳ್ಯ: ಸುಳ್ಯ ಪಟ್ಟಣ ಪಂಚಾಯಿತಿನ ವಾರ್ಡ್ 8 ಹಾಗೂ 16ರಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಎನ್.ಎ. ರಾಮಚಂದ್ರ ಅವರ ನಾಮಪತ್ರಗಳು ಸಿಂಧುವಾಗಿವೆ ಎಂದು ಚುನಾವಣಾಧಿಕಾರಿ ಮಂಗಳವಾರ ಪ್ರಕಟಿಸಿದ್ದಾರೆ.
ಸೋಮವಾರ ನಾಮಪತ್ರ ಪರಿಶೀಲನೆ ನಡೆಯುವ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಎಂ. ವೆಂಕಪ್ಪ ಗೌಡ ಅವರ ರಾಮಚಂದ್ರ ಅವರು ನೀರಿನ ಬಿಲ್ ಪಾವತಿಸಿಲ್ಲ, ಭೂಕಂದಾಯ ಪಾವತಿಸದೆ ಸರ್ಕಾರಕ್ಕೆ ಯಾವುದೇ ತೆರಿಗೆ ಬಾಕಿ ಇಲ್ಲ ಎಂದು ಸುಳ್ಳು ಪ್ರಮಾಣಪತ್ರ ಸಲ್ಲಿಸಿದ್ದಾಗಿ ಆಕ್ಷೇಪಣೆ ಸಲ್ಲಿಸಿದ್ದರು.
ಈ ಕುರಿತು ದಾಖಲೆ ಸಲ್ಲಿಕೆಗೆ ಒಂದು ದಿನದ ಕಾಲಾವಕಾಶವನ್ನು ನೀಡುವಂತೆ ರಾಮಚಂದ್ರ ಪರ ವಕೀಲರು ಅಧಿಕಾರಿಗಳನ್ನು ಕೇಳಿದ್ದರು. ಅದರಂತೆ ಮಂಗಳವಾರ ಅಗತ್ಯ ದಾಖಲೆಗಳನ್ನು ಹಾಜರುಪಡಿಸುವಂತೆ ಅಧಿಕಾರಿಗಳು ಆದೇಶ ನೀಡಿದ್ದರು.
ಮಂಗಳವಾರ ಎರಡೂ ಕಡೆಯ ದಾಖಲೆ ಪರಿಶೀಲಸಿ, ವಾದ ಆಲಿಸಿದ ಚುನಾವಣಾಧಿಕಾರಿಗಳು ನಾಮಪತ್ರ ಸಿಂಧುವಾಗಿದೆ ಎಂದು ಘೋಷಣೆ ಮಾಡಿದರು. ನಳ್ಳಿ ನೀರಿನ ಬಿಲ್ ಪಾವತಿಸಿಲ್ಲ ಎಂಬ ಆರೋಪಕ್ಕೆ ಉತ್ತರಿಸಿದ ರಾಮಚಂದ್ರ ಅವರ ವಕೀಲ ನಾರಾಯಣ ಪುರಸಭೆ ಕಾಯ್ದೆ 41ಎ ಅಡಿ ಬಾಕಿ ವಸೂಲಿಗೆ ತಗಾದೆ ನೋಟಿಸ್ ನೀಡಿರಬೇಕು ಎಂದಿದೆ. ಆದರೆ, ಕಚೇರಿಯಿಂದ ರಾಮಚಂದ್ರ ಅವರಿಗೆ ಇದುವರೆಗೆ ಯಾವುದೇ ನೋಟಿಸ್ ಜಾರಿ ಮಾಡಿದ ಬಗ್ಗೆ ದಾಖಲೆಗಳು ಇಲ್ಲ ಎಂಬುದಾಗಿ ಮುಖ್ಯಾಧಿಕಾರಿ ಲಿಖಿತವಾಗಿ ನೀಡಿದ್ದಾರೆ. ನೋಟಿಸ್ ಜಾರಿ ಮಾಡಿ ಮೂರು ತಿಂಗಳ ಒಳಗೆ ಪಾವತಿ ಮಾಡದೇ ಇದ್ದರೆ ಮಾತ್ರ ಕಾಯ್ದೆ 16 ರಂತೆ ಅನರ್ಹರಾಗುತ್ತಾರೆ ಎಂದರು.
ಭೂಕಂದಾಯ ಬಾಕಿ ಬಗ್ಗೆ ಚಾಲ್ತಿ ವರ್ಷದ ಕಂದಾಯ ಪಾವತಿಸಿಲ್ಲ ಎಂದು ಗ್ರಾಮ ಕರಣಿಕರು ಲಿಖಿತವಾಗಿ ನೀಡಿದ್ದು, ಆರ್ಥಿಕ ವರ್ಷ ಮಾ. 31ರವರೆಗೆ ಅವಕಾಶವಿದೆ. ಈಗಲೇ ಬಾಕಿದಾರ ಆಗುವುದಿಲ್ಲ ಎಂದರು. ಕಂದಾಯ ಕಟ್ಟಲು ಗ್ರಾಮ ಕರಣಿಕರ ಕಚೇರಿಗೆ ಸೋಮವಾರ ಹೋದಾಗ ಅವರು ಕಂದಾಯ ಸ್ವೀಕರಿಸಿಲ್ಲ. ಕಾರಣ ಜ. 15 ರಂದು ಸ್ವೀಕೃತಿ ರಶೀದಿ ಪುಸ್ತಕ ಮುಗಿದಿದ್ದು, ರಶೀದಿ ಇಲ್ಲ ಎಂದು ಲಿಖಿತವಾಗಿ ನೀಡಿದ್ದಾರೆ ಎಂದು ದಾಖಲೆ ಹಾಜರು ಪಡಿಸಿದರು.
ಪ್ರಭಾವ ಬೀರಿ ಸ್ವೀಕಾರ: ಸರ್ಕಾರಕ್ಕೆ ಯಾವುದೇ ತೆರಿಗೆ ಬಾಕಿ ಇಲ್ಲ ಎಂದು ಎನ್.ಎ. ರಾಮಚಂದ್ರ ಪ್ರಮಾಣಪತ್ರದಲ್ಲಿ ಘೋಷಣೆ ಮಾಡಿದ್ದಾರೆ. ಸುಳ್ಳು ಮಾಹಿತಿ ನೀಡಿದರೆ ಐಪಿಸಿ ಕಾಯ್ದೆ 177ರಂತೆ ಕ್ರಿಮಿನಲ್ ದಾವೆ ಹೂಡಲು ಅವಕಶವಿದೆ. ರಾಜಕೀಯ, ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನಾಮಪತ್ರ ಸ್ವೀಕಾರವಾಗುವಂತೆ ಮಾಡಿದ್ದಾರೆ ಎಂದು ವೆಂಕಪ್ಪ ಗೌಡ ಆರೋಪಿಸಿದ್ದಾರೆ. ತಾನು ಬಿಜೆಪಿ ವಿರುದ್ಧ 16ನೇ ವಾರ್ಡ್ನಲ್ಲಿ ಸ್ಪರ್ಧಿಸುತ್ತೇನೆ. ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ. ಅವರೇ ಗೆದ್ದರೆ ಕಾನೂನು ಪ್ರಕಾರ ದಾವೆ ಹೂಡುತ್ತೇನೆ ಎಂದರು.