ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ
ಮಂಗಳೂರು: ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆ ಹೆಚ್ಚಿಸುವುದಿಲ್ಲ, ಉತ್ತಮ ರಸ್ತೆ, ಪುಟ್ಪಾತ್, ಒಳಚರಂಡಿ, ಕುಡಿಯುವ ನೀರು ವ್ಯವಸ್ಥೆ ಮಾಡುವುದಾಗಿ ಕಾಂಗ್ರೆಸ್ ಹೇಳಿದೆ.
ಸಂಪೂರ್ಣ ಚುನಾವಣೆ ಪ್ರಣಾಳಿಕೆಯನ್ನು ಮಾ.2ರಂದು ಮುಖಂಡ ಆಸ್ಕರ್ ಫರ್ನಾಂಡಿಸ್ ಬಿಡುಗಡೆ ಮಾಡುವರು ಎಂದು ಚುನಾವಣೆ ಉಸ್ತುವಾರಿ ಬಿ.ಜನಾರ್ದನ ಪೂಜಾರಿ ಹೇಳಿದರು.
ರಾಜ್ಯದಲ್ಲಿಯೂ ಬಿಜೆಪಿ ಭ್ರಷ್ಟಾಚಾರ ಮಿತಿ ಮೀರಿದ್ದು, ಶೇ.70ಕ್ಕೂ ಹಚ್ಚು ಸಚಿವರು ಭ್ರಷ್ಟರಾಗಿ ದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿಯೂ ಹಗರಣಗಳಿವೆ. ಅವರು ಚುನಾವಣೆಗೆ ಹಣ ಚೆಲ್ಲುತ್ತಿದ್ದಾರೆ. ನಮ್ಮ ಬಳಿ ಹಣ ಇಲ್ಲ ಎಂದರು.
ಕಾಂಗ್ರೆಸ್ ಆಡಳಿತದ 15 ವರ್ಷಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಜಾರಿಗೆ ತರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿತ್ತು. ಕಳೆದ 5 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಮಹಾನಗರ ಪಾಲಿಕೆಯಲ್ಲಿ ಕಾಮಗಾರಿಗಳು ಸರಿಯಾಗಿ ನಡೆದಿಲ್ಲ. ಕೇಂದ್ರದ ಅನುದಾನವನ್ನು ಬೇರೆ ಕಾಮಗಾರಿಗಳಿಗೆ ಬಳಸುತ್ತಿದ್ದಾರೆ. ಕೆಲವೆಡೆ ವೇತನ ನೀಡಲು ಬಳಸಿದ್ದೂ ಇದೆ.
ಕಾಂಕ್ರಿಟ್ ರಸ್ತೆ ಮಾಡಿದರೂ ಫುಟ್ಪಾತ್ ಮಾಡಿಲ್ಲ, ಒಳಚರಂಡಿ ವ್ಯವಸ್ಥೆ ಸರಿ ಇಲ್ಲ, ಪರಿಶಿಷ್ಟರ ಸವಲತ್ತುಗಳ ಸದುಪಯೋಗವಾಗುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ, ಐವನ್ ಡಿಸೋಜ, ಪಿ.ವಿ.ಮೋಹನ್, ಮಹಮ್ಮದ್ ಬದ್ರುದ್ದೀನ್, ಜೆ.ಆರ್.ಲೋಬೊ, ಹರಿಕೃಷ್ಣ ಬಂಟ್ವಾಳ್, ಅರುಣ್ ಕುವೆಲ್ಲೊ, ಟಿ.ಕೆ.ಸುಧೀರ್, ಬಿ.ಇಬ್ರಾಹಿಂ ಇತರರು ಇದ್ದರು.