ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವು
ಬಂಟ್ವಾಳ: ಖಾಸಗಿ ಕಟ್ಟಡವೊಂದರಲ್ಲಿ ಪೈಂಟಿಗ್ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಆಯತಪ್ಪಿ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕ ಸಮೀಪದ ಗೋಳ್ತಮಜಲು ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಸಜಿಪಮುನ್ನೂರು ಗ್ರಾಮದ ನಂದಾವರ ನಿವಾಸಿ ಅಯ್ಯೂಬ್ (18) ಮೃತರು. ಅಯ್ಯೂಬ್ ಅವರು ಗುರುವಾರ ತನ್ನ ನೆರೆಮನೆಯ ಮಹಮ್ಮದ್ ಯಾನೆ ಮೋನಾಕ ಎಂಬವರ ಜೊತೆ ಗೋಳ್ತಮಜಲು ಹಜಾಜ್ ಇಂಡಸ್ಟ್ರೀಸ್ನ ಕಟ್ಟಡಕ್ಕೆ ಪೈಂಟಿಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸಂಜೆ 4.30 ರ ಸುಮಾರಿಗೆ ಅಯ್ಯೂಬ್ ಕಟ್ಟಡದ ಮೇಲ್ಭಾಗದಲ್ಲಿ ಪೈಂಟಿಗ್ ಮಾಡುತ್ತಿದ್ದ ವೇಳೆ ಪಕ್ಕದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿ ತಗಲಿದ್ದು, ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಘಟನೆಯ ತೀವ್ರತೆಗೆ ತಲೆಗೆ ಗಂಭೀರ ಗಾಯಗೊಂಡಿದ್ದ ಅವರನ್ನು ಬಿ.ಸಿ. ರೋಡಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮೃತ ಅಯ್ಯೂಬ್ ತಂದೆ ಅಬ್ದುಲ್ಲ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.