ರಾಜ್ಯದ 'ಸಕಾಲ' ಜಾರಿಗೆ ಕೇಂದ್ರ ಉತ್ಸುಕ: ಡೀವಿ
ಮಂಗಳೂರು: ರಾಜ್ಯದಲ್ಲಿ ಜಾರಿಗೆ ತಂದಿರುವ 'ಸಕಾಲ' ಯೋಜನೆಯನ್ನು ಪರಿಶೀಲಿಸಲು ಈಚೆಗೆ ಕೇಂದ್ರ ತಂಡ ಭೇಟಿ ನೀಡಿದೆ. ರಾಜ್ಯ ಮಾದರಿಯಲ್ಲಿ ಸಕಾಲ ಯೋಜನೆ ಜಾರಿಗೆ ಕೇಂದ್ರ ಉತ್ಸುಕವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಮಂಗಳೂರು ಪುರಭವನದಲ್ಲಿ ಗುರುವಾರ ಮಹಾನಗರ ಪಾಲಿಕೆ ವ್ಯಾಪ್ತಿಯ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದರು. ಕಳೆದ ನಾಲ್ಕು ಮುಕ್ಕಾಲು ವರ್ಷದಲ್ಲಿ ರಾಜ್ಯ ಸರ್ಕಾರ ಏನೂ ಸಾಧನೆ ಮಾಡಿಲ್ಲ ಎಂದು ಆರೋಪಿಸುವವರಿಗೆ ಕೇಂದ್ರ ಯುಪಿಎ ಸರ್ಕಾರವೇ ತನ್ನ ತಂಡವನ್ನು 'ಸಕಾಲ' ಪರಿಶೀಲನೆಗೆ ಕಳುಹಿಸಿರುವುದನ್ನು ಬೊಟ್ಟು ಮಾಡಿದರು. ರಾಜಕೀಯ ಗೊಂದಲಗಳು ಏನೇ ಇದ್ದರೂ ಅಭಿವೃದ್ಧಿಗೆ ಅಡ್ಡಿಯಾಗಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಕಳೆದ 25 ವರ್ಷಗಳಲ್ಲಿ ಯಾವುದೇ ಸರ್ಕಾರ ಕೊಡದಷ್ಟು ನೆರವನ್ನು ಬಿಜೆಪಿ ಸರ್ಕಾರ ನೀಡಿದೆ. ನಗರ ಪ್ರದೇಶಗಳಲ್ಲಿ ಬಿಜೆಪಿ ಸಾಧನೆಗೆ ಜನತೆ ಹ್ಯಾಟ್ಸ್ಅಪ್ ಎನ್ನುತ್ತಿದ್ದಾರೆ ಎಂದರು. ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸ್ಥಳೀಯಾಡಳಿತ ಕ್ರಿಯಾಶೀಲ, ಶಕ್ತವಾಗಿದ್ದು, ಸರ್ಕಾರಿ ನಿಧಿಯ ಸಮರ್ಪಕ ಬಳಕೆಯಾಗಿದೆ. ಆದ್ದರಿಂದ ಬಿಜೆಪಿ ಕಾರ್ಯಕರ್ತರಿಗೆ ಮತ ಕೇಳುವ ಆತ್ಮಸ್ಥೈರ್ಯ ಇದೆ. ಪ್ರತಿ ಮನೆ ಭೇಟಿಯಲ್ಲಿ ಸರ್ಕಾರದ ಸಾಧನೆ ತಿಳಿಸಿ ಎಂದರು.
ವಿಧಾನ ಪರಿಷತ್ತು ಸದಸ್ಯ ಮೋನಪ್ಪ ಭಂಡಾರಿ ಮಾತನಾಡಿ, ರಾಜ್ಯದಲ್ಲಿ ನಿರ್ಮಲ ನಗರ ಪುರಸ್ಕಾರವನ್ನು ಮಂಗಳೂರು ಪಾಲಿಕೆ ಪಡೆದುಕೊಂಡಿದ್ದು, ಅಭಿವೃದ್ಧಿ ಕಾಮಗಾರಿಯಲ್ಲಿ ಮುಂಚೂಣಿಯಲ್ಲಿದೆ. ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದಾಗ ಏನೂ ಮಾಡಿಲ್ಲ, ಹೀಗಾಗಿ ಬಿಜೆಪಿ ಆಡಳಿತವನ್ನು ಪ್ರಶ್ನಿಸುವ ನೈತಿಕತೆ ಕಾಂಗ್ರೆಸ್ಗೆ ಇಲ್ಲ ಎಂದರು. ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್, ಜಿಲ್ಲಾ ಪ್ರಭಾರಿ ಪ್ರತಾಪ್ಸಿಂಹ ನಾಯಕ್, ಜಿಲ್ಲಾ ಕಾರ್ಯದರ್ಶಿ ಸಂಜೀವ ಮಠಂದೂರು, ನಗರ ಅಧ್ಯಕ್ಷ ಶ್ರೀಕರ ಪ್ರಭು, ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ, ಮೂಡಾ ಅಧ್ಯಕ್ಷ ರಮೇಶ್, ಮುಖಂಡರಾದ ಜಯರಾಮ ಶೆಟ್ಟಿ ಮತ್ತಿತರರಿದ್ದರು.