10 ಅಡಿ ಎತ್ತರದಿಂದ ಬಿದ್ದು ಕಾರ್ಮಿಕ ಸಾವು
ಮಂಗಳೂರು: ಕಳವಾರಿನಲ್ಲಿ ಎಂಆರ್ಪಿಎಲ್ 3ನೇ ಹಂತದ ಕಾಮಗಾರಿ ನಡೆಯುತ್ತಿದ್ದಾಗ 10 ಅಡಿ ಎತ್ತರದಿಂದ ಕೆಳಕ್ಕೆ ಬಿದ್ದು ಕಾರ್ಮಿಕ ಅಲಗು ಕುಮಾರ್ ಎಂಬಾತ ಸಾವಿಗೀಡಾದ ಘಟನೆ ಭಾನುವಾರ ವರದಿಯಾಗಿದೆ. ಪವರ್ಮೇಕ್ ಕಂಪನಿಯಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ ಅಲಗು ಕುಮಾರ್, ಶನಿವಾರ ಹೀಟರ್ ರಿಕವರಿ ಸ್ಟೀಮ್ ಜನರೇಟರ್-2 ಬಾಯ್ಲರ್ನ 10 ಮೀಟರ್ ಎತ್ತರದಲ್ಲಿ ವೆಲ್ಡಿಂಗ್ಗೆ ನೆರವಾಗುತ್ತಿದ್ದರು. ಅಷ್ಟರಲ್ಲಿ ಆಯತಪ್ಪಿ ಕೆಳಕ್ಕೆ ಬಿದ್ದು ತಲೆ ಹಾಗೂ ಶರೀರಕ್ಕೆ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಮೃತಪಟ್ಟಿದ್ದರು. ಎತ್ತರ ಕಟ್ಟಡದಲ್ಲಿ ಕೆಲಸ ಮಾಡಬೇಕಾದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು, ಆದರೆ ಇವರಿಗೆ ಗುತ್ತಿಗೆ ಕಂಪನಿಯು ಸೇಫ್ಟಿ ಬೆಲ್ಟ್, ನೆಟ್ ಸುರಕ್ಷತೆಯನ್ನು ನೀಡಿರಲಿಲ್ಲ. ಈ ನಿರ್ಲಕ್ಷದಿಂದ ಸಾವು ಸಂಭವಿಸಿದ್ದಾಗಿ ಕಂಪನಿಯ ಸುರಕ್ಷಾ ಎಂಜಿಯರ್ ರಾಜ್ಕುಮಾರ್, ಸೂಪರ್ವೈಸರ್ ಶ್ಯಾಮ್ ಪಟ್ನಾಯಕ್ ವಿರುದ್ಧ ಮಹಮ್ಮದ್ ಆಶೀಖ್ಖಾನ್ ನೀಡಿದ ದೂರಿನಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅನಾರೋಗ್ಯ ಚಿಂತೆ: ಆತ್ಮಹತ್ಯೆ
ಮಂಗಳೂರು: ಅನಾರೋಗ್ಯ ಕಾರಣಕ್ಕೆ ಜಯಂತ ಶೆಟ್ಟಿ(55)ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ವರದಿಯಾಗಿದೆ. ನಡುಗೋಡು ಗ್ರಾಮದ ಜಯಂತ ಶೆಟ್ಟಿ ಒಂದು ವರ್ಷದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಔಷಧಿ ಮಾಡಿದರೂ ಪ್ರಯೋಜನವಾಗದಾಗ ಜ.18ರ ರಾತ್ರಿ ಮಲಗಿದಾತ ಮರುದಿನ ಬೆಳಗ್ಗೆ ಮಲ್ಲಿಗೆ ಅಂಗಡಿ ಬ್ರಾಮರಿ ನಿಲಯದಲ್ಲಿ ಮನೆಯ ಚಾವಡಿ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಈ ಕುರಿತು ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ-ಬೈಕ್ ಡಿಕ್ಕಿ: ಸವಾರ ಗಂಭೀರ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನೆಲ್ಯಾಡಿಯ ಕೋಲ್ಪೆ ಎಂಬಲ್ಲಿ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಪ್ರಜ್ವಲ್ ಎಂಬಾತ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಪ್ರಜ್ವಲ್, ಚೆನ್ನರಾಯಪಟ್ಟಣ ನಿವಾಸಿ ದಿವಾಕರ್ ಎಂಬವರ ಮಗನಾಗಿದ್ದು, ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಮರ ಸಾಗಾಟ ಲಾರಿ ಡಿಕ್ಕಿ ಹೊಡೆಯಿತು ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಾಪತ್ತೆಯಾದ ವ್ಯಕ್ತಿ ಪತ್ತೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕೋಲ್ಪೆ ಎಂಬಲ್ಲಿನ ನಾಶೀರ್ ಎಂಬವರ ತೋಟದ ಮನೆಯಲ್ಲಿ ಕೆಲಸಕ್ಕಿದ್ದ ಹಾಸನ ಮೂಲದ ರಾಮಪ್ಪ ಎಂಬವರು ನಾಪತ್ತೆಯಾಗಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ರಾಮಪ್ಪ ತೋಟದ ಕೆಲಸವನ್ನು ಬಿಟ್ಟು ಪುತ್ತೂರು ಸಮೀಪದ ಸುಣ್ಣದ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಅವರನ್ನು ವಿಚಾರಣೆಗೆ ತೆಗೆದುಕೊಂಡಿದ್ದಾರೆ.
ಕಾಣೆಯಾದಾತ ಪತ್ತೆ
ಉಪ್ಪಿನಂಗಡಿ: ಕಳೆದ ಜ.14ರಂದು ನಾಪತ್ತೆಯಾಗಿದ್ದ ನಂದಿನಿ ನಗರ ನಿವಾಸಿ ಹರೀಶ್ (32) ಎಂಬಾತ ಮಂಗಳೂರು ರೈಲ್ವೆ ಸ್ಟೇಷನ್ ಬಳಿ ಪತ್ತೆಯಾಗಿದ್ದಾರೆ. ಕೆಲಸ ಹುಡುಕಿಕೊಂಡು ತಾನು ಬೆಂಗಳೂರಿಗೆ ಹೋಗಿದ್ದು, ಮಕ್ಕಳನ್ನು ನೋಡುವ ಹಂಬಲದಿಂದ ಮತ್ತೆ ಊರಿನತ್ತ ಬರುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಬೈಕ್ ಅಪಘಾತ: ಸವಾರ ಸಾವು
ಸುಳ್ಯ: ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಕೊಯನಾಡಿನಲ್ಲಿ ನಡೆದಿದೆ. ಮಡಿಕೇರಿಯಿಂದ ಸಂಪಾಜೆಗೆ ಬಂದು ಬಳಿಕ ಮಡಿಕೇರಿಗೆ ಹೋಗುತ್ತಿದ್ದ ಮಹದೇವಪೇಟೆಯ ಅಕ್ರಂ ಮತ್ತು ರೋಷನ್ ಸಂಚರಿಸುತ್ತಿದ್ದ ಪಲ್ಸರ್ ಬೈಕ್ ಕೊಯನಾಡಿನಲ್ಲಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆಯಿತು. ಬೈಕ್ ಸವಾರ ಅಕ್ರಂ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿ ಸವಾರ ರೋಷನ್ ಗಂಭೀರ ಗಾಯಗೊಂಡಿದ್ದಾರೆ.