ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದಕ್ಷಿಣ ಕನ್ನಡ

ಉರುಂಬಿ ಜಲವಿದ್ಯುತ್ ಯೋಜನೆ ಜಾರಿಗೆ ಆಗ್ರಹ

Lingaraj Badiger
Updated On : 21 Jan 2013, 12:33 pm

ಮಂಗಳೂರು: ಕುಮಾರಧಾರಾ ನದಿಗೆ ಕುಂತೂರು-ಪೆರಾಬೆಯ ಉರುಂಬಿಯಲ್ಲಿ ಕುಕ್ಕೆ ಹೈಡ್ರೋ ಪ್ರಾಜೆಕ್ಟ್ 24 ಮೆಗಾವ್ಯಾಟ್ ವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಾಗಿದೆ. ಈ ಯೋಜನೆ ಅನುಷ್ಠಾನಕ್ಕೆ ಕಂಪನಿಯು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದು, ಇದಕ್ಕೆ ರೈತರು ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ಜಲವಿದ್ಯುತ್ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಕುಮಾರಧಾರಾ ಉರುಂಬಿ ಜಲವಿದ್ಯುತ್ ಯೋಜನೆ ಅನುಷ್ಠಾನ ಸಮಿತಿ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಶುಕ್ರವಾರ ಜಲವಿದ್ಯುತ್ ಅನುಷ್ಠಾನ ವಿರೋಧಿ ಸಮಿತಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಮರುದಿನವೇ ಕಂಪನಿಯ ಪರವಾಗಿ ಇನ್ನೊಂದು ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸುವುದರೊಂದಿಗೆ ಜಾಗ ನೀಡುವಲ್ಲಿ ರೈತರಲ್ಲೇ ಒಡಕು ಸೃಷ್ಟಿಯಾದಂತಾಗಿದೆ.
ಈ ಯೋಜನೆಯಲ್ಲಿ ಅಣೆಕಟ್ಟೆ ನಿರ್ಮಿಸಿದರೆ, ಅಂತರ್ಜಲ ವೃದ್ಧಿಯಾಗುತ್ತದೆ, ವಿದ್ಯುತ್ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ. ಯೋಜನೆಗೆ ಇಂಧನ ಇಲಾಖೆಯ ಅನುಮತಿ ಇದ್ದು, ಹೊಸಮಠ ಪಂಚಾಯ್ತಿಯೂ ಒಪ್ಪಿಗೆ ನೀಡಿದೆ. ಜನಹಿತವನ್ನು ಮರೆತು ಹೋರಾಟ ಸಮಿತಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದು 50 ಮಂದಿಯ ಸಹಿಯುಳ್ಳ ಮನವಿಯಲ್ಲಿ ತಿಳಿಸಲಾಗಿದೆ.
ಫೆ.10ರಂದು ಯುವ ಬಂಟರ ದಿನಾಚರಣೆ
ಪುತ್ತೂರು: ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಫೆ.10ರಂದು ಬಂಟರ ಭವನದಲ್ಲಿ ಯುವ ಬಂಟರ ದಿನಾಚರಣೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ರಮೇಶ್ ರೈ ಡಿಂಬ್ರಿ ತಿಳಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗಣಹೋಮ, ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಯುವ ಬಂಟರ ಪ್ರತಿಭಾನ್ವೇಷಣೆ ಪುರಸ್ಕಾರ, ಅಭಿನಂದನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಉದ್ಘಾಟಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ. ತಾಲೂಕು ಬಂಟರ ಸಂಘದ ಅಧ್ಯಕ್ಷ ನುಳಿಯಾಲು ಜಗನ್ನಾಥ ರೈ ಮಾದೋಡಿ ಅಧ್ಯಕ್ಷತೆ ವಹಿಸಿ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಚಂದ್ರಶೇಖರ ರೈ ನಡುಬೈಲು, ಸಂದೇಶ್ ಕುಮಾರ್ ಶೆಟ್ಟಿ, ಸದಾನಂದ ರೈ ಅಗರ್‌ಗುಡಿ, ರಶ್ಮೀ ಮೋಹನ್ ರೈ ಸೂತ್ರಬೆಟ್ಟು ಮತ್ತು ಶರತ್ ಆಳ್ವ ಇವರನ್ನು ಅಭಿನಂದಿಸಲಾಗುವುದು ಎಂದರು. ಯುವ ಬಂಟರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸ್ಥಾಪಕ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಸಂಚಾಲಕ ಶಶಿಕುಮಾರ್ ರೈ ಬಾಲ್ಯೋಟ್ಟು, ಪ್ರಧಾನ ಕಾರ್ಯದರ್ಶಿ ಸತೀಶ್ ರೈ ಕಟ್ಟಾವು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement