ಟಿಪ್ಪು ವಿವಿ: ಜೆಡಿಯು ವಿರೋಧ, ಪಿಎಫ್ಐ ಪರ
ಮಂಗಳೂರು: ಟಿಪ್ಪು ಸುಲ್ತಾನ್ ಹೆಸರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲಿರುವ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ಸಂಯುಕ್ತ ಜನತಾದಳ ವಿರೋಧ ವ್ಯಕ್ತಪಡಿಸಿದೆ.
ಟಿಪ್ಪು ಮತಾಂಧನಾಗಿದ್ದು, ಕ್ರೈಸ್ತ ಸಮುದಾಯದ ಮಹಿಳೆಯರೂ ಮೇಲೂ ಅತ್ಯಾಚಾರವೆಸಗಿದ್ದ. ಮಕ್ಕಳು, ವೃದ್ಧರು ಸೇರಿದಂತೆ ಅನೇಕ ಮಂದಿಯನ್ನು ಶ್ರೀರಂಗಪಟ್ಟಣದಲ್ಲಿ ಕೂಡಿಹಾಕಿ ಅನ್ನ, ನೀರು ನೀಡದೆ ಸಾಯಿಸಿದ್ದ ಎಂದು ಇತಿಹಾಸ ಹೇಳುತ್ತದೆ. ಇಂಥ ಕ್ರೂರಿಯೊಬ್ಬನ ಹೆಸರಲ್ಲಿ ವಿವಿ ಸ್ಥಾಪಿಸಲು ಮುಂದಾಗಿರುವಾಗ ಕ್ರೈಸ್ತ ಧಾರ್ಮಿಕ ನಾಯಕರಾಗಲೀ, ರಾಜಕೀಯ ಮುಖಂಡರಾಗಲೀ ಮೌನ ವಹಿಸಿರುವುದು ಯಾಕೆ ಎಂದು ಜೆಡಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಶಾಂತ್ ಡಿ'ಸೋಜ ಪ್ರಶ್ನಿಸಿದ್ದಾರೆ.
ಪಿಎಫ್ಐ ಖಂಡನೆ: ಟಿಪ್ಪು ವಿವಿ ಸ್ಥಾಪನೆಗೆ ಅಡ್ಡಿ ಪಡಿಸುತ್ತಿರುವ ಹಾಗೂ ಮುಸ್ಲಿಂ ವಿವಿಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಭಯೋತ್ಪಾದಕರು ಎಂದು ಶಾಸಕ ಗೋ.ಮಧುಸೂದನ್ ನೀಡಿರುವ ಹೇಳಿಕೆಯನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಖಂಡಿಸಿದೆ. ಸಂಘಪರಿವಾರ ಏಜೆಂಟರು ಟಿಪ್ಪು ವಿರುದ್ಧ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಸಂವಿಧಾನದಡಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಅವಕಾಶ ಇದೆ ಎಂದು ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸುಹೈಲ್ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.
ಕಣಕ್ಕೂರು ಗಂಗಾಧರ ಮಾಸ್ತರ್ ನಿಧನ
ಸುಳ್ಯ: ಮುಳ್ಳೇರಿಯ ಹೈಯರ್ ಸೆಕೆಂಡರಿ ಸ್ಕೂಲ್ ಪ್ರಾಂಶುಪಾಲ, ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೋಲ್ಚಾರಿನ ಕಣಕ್ಕೂರು ನಿವಾಸಿ ಗಂಗಾಧರ ಮಾಸ್ತರ್ ಕಣಕ್ಕೂರು (49) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬಹುಮುಖ ಪ್ರತಿಭಾವಂತರಾಗಿದ್ದ ಅವರು ಕೋಲ್ಚಾರು ನವಜ್ಯೋತಿ ಯುವಕ ಮಂಡಲ, ಕೋಲ್ಚಾರು ಶಾಲಾ ಆಡಳಿತ ಮಂಡಳಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ವಿವಿಧ ಪದವಿಯನ್ನು ಅಲಂಕರಿಸಿದ್ದರು. ಮುಳ್ಳೇರಿಯಾದಲ್ಲಿ ನಡೆದ ಕುಂಬಳೆ ಉಪ ಜಿಲ್ಲಾ ಶಾಲಾ ಯುವ ಜನೋತ್ಸವದ ನೇತೃತ್ವ ವಹಿಸಿದ್ದರು. ಅವರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.